ಬಳ್ಳಾರಿ: ಕೋವಿಡ್ 2ನೇ ಅಲೆಯು ಮೊದಲಿಗಿಂತ ಅತ್ಯಂತ ವೇಗವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆಗಳ ಜತೆ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ತಾಲೂಕುಗಳ ತಹಸೀಲ್ದಾರರು,ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದೀರಿ. ಈ ಅನುಭವ ಬಳಸಿಕೊಂಡು 2ನೇ ಅಲೆಯನ್ನು ನಿಯಂತ್ರಿಸುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಕಳೆದ ಬಾರಿಗೆ ಹೋಲಿಸಿದರೆ ಕೋವಿಡ್ 2ನೇ ಅಲೆಯ ಬಗ್ಗೆ ಜನರಲ್ಲಿ ಹೆದರಿಕೆ ಕಡಿಮೆ ಆಗಿದೆ. ವೈದ್ಯರು, ಅಧಿಕಾರಿಗಳು ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕೋವಿಡ್ ತಪಾಸಣಾ ಪ್ರಮಾಣ ಹೆಚ್ಚಳವಾಗಬೇಕು. ಸೊಂಕಿತರೊಂದಿಗಿನ ಸಂಪರ್ಕಿತರ ಪತ್ತೆಹಚ್ಚುವಿಕೆ(ಟ್ರೇಸಿಂಗ್) ವೇಗ ಪಡೆದುಕೊಳ್ಳಬೇಕು. ನಿಗದಿಪಡಿಸಿದ ಪ್ರಮಾಣದಲ್ಲಿ ಲಸಿಕೆ ನೀಡುವ ಗುರಿ ತಲುಪಬೇಕು ಎಂದು ಹೇಳಿದರು.
ಕಳೆದ ವರ್ಷ ಬಾಧಿಸಿದ ಕೋವಿಡ್ ಸಮಸ್ಯೆ ನಮಗೆ ತುಂಬಾ ಅನುಭವ ಕಲಿಸಿದೆ.ಅಧಿಕಾರಿಗಳು ಸೊಂಕು ಹೆಚ್ಚಳವಾಗದಂತೆ ಮತ್ತು ಈ ಕುರಿತು ನಿರ್ಲಕ್ಷ್ಯವಹಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಕೋವ್ಯಾಕ್ಸಿನ್ ವ್ಯರ್ಥವಾಗಬಾರದು. ಒಂದು ಡೋಸ್ ಒಂದು ಪ್ರಾಣ ಉಳಿಸಬಲ್ಲದು. ಲಸಿಕೆ ಹಾಕುವಿಕೆ ಇನ್ನಷ್ಟು ಪರಿಣಾಮಕಾರಿಯಾಗಲಿ ಎಂದು ತಿಳಿಸಿದರು.
ಗಡಿಭಾಗದ ಜನರಿಗೆ ಲಸಿಕೆ ಬಗ್ಗೆ ಅರಿವಿನ ಕೊರತೆಯಿದೆ. ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಲಸಿಕೆಯ ಕುರಿತು ಅರಿವು ಮೂಡಿಸಲು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರು ಮಾತನಾಡಿ, ಕೋವಿಡ್ ಧೃಢಪಟ್ಟವರನ್ನು ಗುರುತಿಸಿ ಅವರ ಸಂಪರ್ಕದಲ್ಲಿ ಇದ್ದ ಕನಿಷ್ಠ 30 ಜನರನ್ನು ಪರೀಕ್ಷೆಗೆ ಒಳಪಡಿಬೇಕು. ಕ್ವಾರೆಂಟೈನ್‍ನಲ್ಲಿರುವವನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಬೇಕು. ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಮತ್ತಷ್ಟು ತೀವ್ರವಾಗಲಿ. ಹೋಂ ಕ್ವಾರೇಂಟೈನ್ ನಲ್ಲಿರುವವ ಮನೆಗೆ ಭೇಟಿ ಮಾಡಿ ಪರಿಶೀಲನೆ ಮಾಡಿ ಎಂದು ತಿಳಿಸಿದರು.
ಆಂದ್ರ ಗಡಿಭಾಗದಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಿ ಅಲ್ಲಿಯೇ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಶಿಕ್ಷಕರಿಗೆ ಸೂಚಿಸುವಂತೆ ಡಿಡಿಪಿಐ ಮತ್ತು ಡಿಡಿಪಿಯು ಅವರಿಗೆ ಸೂಚಿಸಿದರು.
ಎಲ್ಲ ತಹಸೀಲ್ದಾರರು ತಾಲೂಕುಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳ ಸಿದ್ದತೆ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.
—–