ಏಕಾಂಗಿ ಹೋರಾಟಗಾರ ವಿವೇಕಾನಂದ ಹೆಚ್. ಕೆ ಸಂದರ್ಶನ ಸಂದರ್ಶಕರು:ಯಲ್ಲಪ್ಪ ಹಂದ್ರಾಳ್, ದೇವದುರ್ಗ

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಿಸುತ್ತಿರುವ ಯಲ್ಲಪ್ಪ ಹಂದ್ರಾಳ್ ಅವರು ಕ್ರಿಯಾಶೀಲ ಅಧ್ಯಾಪಕರು. ಶಾಲಾಭಿವೃದ್ಧಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಖುಷಿ ಕಾಣುವ ಇವರು ನಿರಂತರ ಸುಂದರ ಸಮಾಜದ ಕನಸು ಕಾಣುತ್ತಿರುವವರು.
ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ರಾಜ್ಯದಲ್ಲಿ
‘ಜ್ಞಾನ ಭಿಕ್ಷಾ ಪಾದಯಾತ್ರೆ’ ಆರಂಭಿಸಿರುವ ಬೆಂಗಳೂರಿನ ಸಮಾಜಮುಖಿ ವಿವೇಕಾನಂದ ಹೆಚ್ ಕೆ
ಅವರು ಕಳೆದ ತಿಂಗಳು ದೇವದುರ್ಗಕ್ಕೆ ಭೇಟಿ ನೀಡಿದಾಗ ಇವರ ಜತೆ ನಡೆಸಿದ ಮಾತುಕತೆ ಇದು.👇
ಮಾ.29ರಂದು ಕುರುಗೋಡು ತಾಲೂಕಿನ ಮೂಲಕ ಬಳ್ಳಾರಿಗೆ ಆಗಮಿಸಿರುವ ವಿವೇಕಾನಂದ ಅವರ ಪ್ರವಾಸಕ್ಕೆ 5 ತಿಂಗಳು ಅಂದರೆ 150 ದಿನಗಳಾಗಿವೆ.
11 ಜಿಲ್ಲೆಗಳು – 4500 ಕಿಲೋಮೀಟರ್ ಕ್ರಮಿಸಿ 400 ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ಸ್ಥಳೀಯವಾಗಿ ನಡೆಯುವುದು ಸೇರಿ ದಿನವೂ ಸರಾಸರಿ ‌30 ಕಿಲೋಮೀಟರ್ ನಡೆಯುತ್ತಿರುವ ಇವರನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಮಾ.30ರಂದು ವಿಡಿಯೋ ಸಂದರ್ಶನ ಮಾಡಿದೆ.
ಈ ಸಂದರ್ಶನವೂ ಶೀಘ್ರದಲ್ಲಿ ಪ್ರಸಾರವಾಗುವುದು.
(ಸಂಪಾದಕರು)

ಯಲ್ಲಪ್ಪ ಹಂದ್ರಾಳ್: “ಸರ್ ನಮಸ್ಕಾರ. ನೀವು ಇಡೀ ಕರ್ನಾಟಕವನ್ನು ‘ಪಾದಯಾತ್ರೆ’ ಮುಖಾಂತರ ನೋಡಬೇಕೆಂದು ತೆಗೆದುಕೊಂಡ ನಿರ್ಣಯ ಆಕಸ್ಮಿಕವೋ? ಅಥವಾ ಪೂರ್ವ ನಿರ್ಧಾರಿತವೋ?
ವಿವೇಕಾನಂದ ಹೆಚ್ ಕೆ: “ನಮಸ್ಕಾರ. ಕರ್ನಾಟಕವನ್ನು ‘ಪಾದಯಾತ್ರೆ’ ಮುಖಾಂತರ ತಿರುಗಬೇಕು, ಸುತ್ತು ಹಾಕಬೇಕು’ ಎಂಬ ಯೋಜನೆ ನಿನ್ನೆ ಮೊನ್ನೆಯದಲ್ಲ. ಮೂರು ವರ್ಷಗಳ ಹಿಂದಿನ ಯೋಚನೆಯಾಗಿದೆ.2017 ರಲ್ಲೇ ಇದನ್ನು ತೀರ್ಮಾನಿಸಿ ಅದಕ್ಕಾಗಿ ತಯಾರಿ ಮಾಡುತ್ತಿದ್ದೆ. ದಿನಾಲು 10ರಿಂದ 15 ಕಿ.ಮೀ ನಡೆಯುವುದು. ಯೋಗ ಮಾಡುವುದು. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಪ್ರಯತ್ನ ಮಾಡುತ್ತಾ ಬಂದಿದ್ದೆ. ಹಾಗಾಗಿ ಇದು ಆಕಸ್ಮಿಕ ನಿರ್ಣಯವಲ್ಲ.

ಯಲ್ಲಪ್ಪ ಹಂದ್ರಾಳ್: ನೀವು ಕರ್ನಾಟಕದ ಎಲ್ಲಾ ತಾಲ್ಲೂಕುಗಳನ್ನು ಸಂಪರ್ಕಿಸುತ್ತಾ ನಡೆದಿದ್ದೀರಿ. ನೇರವಾಗಿ ಹೋಗಬಹುದಿತ್ತಲ್ಲ?”
ವಿವೇಕಾನಂದ ಹೆಚ್ ಕೆ: “ಇಲ್ಲ. ನಾನು ನೇರವಾಗಿ ಹೋಗಿ ಬಿಟ್ಟಿದ್ದರೆ ಪಾದಯಾತ್ರೆ ಕೇವಲ 800 ಕಿಲೋಮೀಟರ್ ಮಾತ್ರ ಆಗುತ್ತಿತ್ತು. ನನಗೆ ಅದು ಸರಿಯಾದ ಪಯಣ ಅಲ್ಲ ಎಂದು ಅನಿಸಿದ ಕಾರಣ ಈ ರೀತಿಯಾಗಿ ಎಲ್ಲಾ ತಾಲ್ಲೂಕುಗಳನ್ನು ಸುತ್ತುತ್ತಿದ್ದೇನೆ. ತಾಲೂಕಿನ ಸಾಕಷ್ಟು ಜನರಿಗೆ ನನ್ನ ‘ಜ್ಞಾನಭಿಕ್ಷಾ’ ಕಾರ್ಯಕ್ರಮವನ್ನು ಮುಟ್ಟಿಸುತ್ತಿದ್ದೇನೆ. ಇದು ನೇರವಾಗಿ ಹೋಗಿದ್ದರೆ ಸಾಧ್ಯವಾಗುತ್ತಿದ್ದಿಲ್ಲ.

ಯಲ್ಲಪ್ಪ ಹಂದ್ರಾಳ್: “ನೀವು ಹೋದಲ್ಲೆಲ್ಲ ಈಗಾಗಲೇ ಜಾಗೃತಿ ಇರುವ ಮತ್ತು ಒಳ್ಳೆಯ ಜನರ ಸಂಪರ್ಕವೇ ಸಿಕ್ತಾ ಇದೆ. ಯಾವ ಜನರನ್ನು ಬದಲಾಯಿಸಬೇಕು? ಯಾವ ಜನರಿಗೆ ನಿಮ್ಮ ವಿಚಾರಗಳು ಮುಟ್ಟಬೇಕು? ಎಂದು ನೀವು ತೀರ್ಮಾನಿಸಿದ್ದೀರೋ ಅವರನ್ನು ಮುಟ್ಟಲು ಆಗುತ್ತಿಲ್ಲ. ಎಂಬ ಭಾವ ಇಲ್ಲವೇ?
ವಿವೇಕಾನಂದ ಹೆಚ್.ಕೆ: “ಹಾಗೇನಿಲ್ಲ. ಈಗ ಸಾಕಷ್ಟು ಜನರನ್ನು ಭೇಟಿಯಾಗಿ ಅವರಿಗೆ ‘ಒಳ್ಳೆಯವರಾಗಿ’, ‘ಒಳ್ಳೆ ಕೆಲಸವನ್ನು ಮಾಡಿ’ ಎಂದು ಹೇಳುತ್ತಿದ್ದೇನೆ. , ‘ಎಲ್ಲರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸವನ್ನು ಮಾಡಬೇಕು’, ‘ಸಹಾಯ ಮಾಡಬೇಕು’ ‘ಜಾತಿ, ಧರ್ಮ, ಭಾಷೆ ಅಂತ ಕಚ್ಚಾಡುವದನ್ನು ಬಿಡಬೇಕು’ ಎಂದೂ ನಾನು ಹೇಳುತ್ತಿದ್ದೇನೆ. ನೀವು ಹೇಳಿದ ಹಾಗೆ ಹಳ್ಳಿಗಳನ್ನು ಕಡಿಮೆ ಎಂದರೂ ಹೋಬಳಿಗಳನ್ನು ತಲುಪಬೇಕಿತ್ತು. ಹಾಗೇ ಹೊರಟರೆ 20,000 ಕಿಮೀ ಆಗುತ್ತಿತ್ತು.ಆದರೆ ಅದು ಈಗ ಸಾಧ್ಯವಾಗ್ತಿಲ್ಲ . ಮತ್ತೊಮ್ಮೆ ನಾನು ಅವರನ್ನು ಮುಟ್ಟುವ ಪ್ರಯತ್ನ ಮಾಡುತ್ತೇನೆ.”

ಹಂದ್ರಾಳ್: “ಫೇಸ್ಬುಕ್ ನ ಉತ್ತಮ ಬರಹಗಾರರು ಎಂದು ನೀವು ಪ್ರಸಿದ್ಧರಾಗಿದ್ದೀರಿ. ಇತ್ತೀಚಿಗೆ ನಿಮ್ಮ ಫೇಸ್ಬುಕ್ ಪೋಸ್ಟ್ ಗೆ ಬರುವ ಲೈಕುಗಳು, ಕಾಮೆಂಟ್ ಗಳು ಕಡಿಮೆಯಾಗಿವೆ. ಹತಾಶರಾಗಿ ಈ ರೀತಿಯ ಪಾದಯಾತ್ರೆ ಕೈಗೊಂಡಿದ್ದೀರಿ ಎಂಬ ಆರೋಪ ಇದೆಯಲ್ಲ!?
ವಿವೇಕಾನಂದ: ಹಾಗೇನಿಲ್ಲ ನಾನು ಫೇಸ್ಬುಕ್ ನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಉತ್ತಮ ಸ್ನೇಹಿತರ ಸೇತುವಾಗಿ ಫೇಸ್ಬುಕ್ ನನಗೆ-ನಮಗೆ ಸಹಾಯ ಮಾಡುತ್ತಿದೆ. ನಮ್ಮ ಅನಿಸಿಕೆಗಳನ್ನು, ನಮ್ಮ ವಿಚಾರಗಳನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಿದಾಗ ಬಹಳಷ್ಟು ಜನ ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ ಫೇಸ್ ಬುಕ್ಕಲ್ಲಿ ನನ್ನ ಜನಪ್ರಿಯತೆ ಕಡಿಮೆಯಾಗಿದೆ ಎಂದು ನನಗೆ ಅನಿಸಿದರೂ ಅದನ್ನು ಪುನಃ ಪಡೆಯಬೇಕೆಂದು ಇದನ್ನು ನಾನು ಮಾಡಿಲ್ಲ ಅದರ ಅವಶ್ಯಕತೆ ನನಗೆ ಇಲ್ಲ.”

ಯಲ್ಲಪ್ಪ ಹಂದ್ರಾಳ್: ಕುಟುಂಬಸ್ಥರಿಂದ ಬಹಳ ದಿನಗಳ ಕಾಲ ದೂರ ಇರುವುದು ನಿಮಗೆ ಹೇಗೆ ಸಾಧ್ಯವಾಗುತ್ತಿದೆ? ಸಂಪರ್ಕವನ್ನೇನಾದರೂ ಸಾಧಿಸುತ್ತೀರಾ? ಅಥವಾ ವಿಡಿಯೋ ಕಾಲ್ ಮಾಡಿ ವಿಚಾರಿಸುತ್ತೀರಾ?”
ವಿವೇಕಾನಂದ: “ಹೌದು. ಕುಟುಂಬಸ್ಥರಿಂದ ದೂರ ಇರುವುದು ಅಷ್ಟೇನು ಸುಲಭವಲ್ಲ. ಆದರೆ ಕುಟುಂಬವೇ ಎಲ್ಲಾ ಅಲ್ಲವಲ್ಲ. ಏನನ್ನಾದರೂ ಸಾಧಿಸಬೇಕಾದರೆ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ನನಗೂ ಇನ್ನೂ ಪುಟ್ಟ ಮಗ ಇದ್ದಾನೆ. ಫೋನ್ ಕಾಲ್, ವೀಡಿಯೋ ಕಾಲ್ ಮಾಡಿ ಕುಟುಂಬಸ್ಥರ ಸಂಪರ್ಕದಲ್ಲಿದ್ದೇನೆ. ಕುಟುಂಬದವರನ್ನು ಇದಕ್ಕಾಗಿ ಮಾನಸಿಕವಾಗಿ ತಯಾರುಮಾಡಿದ್ದೇನೆ. ಸ್ವತಂತ್ರವಾಗಿರುವ ತರಬೇತಿಯನ್ನು ಅಪರೋಕ್ಷವಾಗಿ ನೀಡಿದ್ದೇನೆ. ಸಣ್ಣಪುಟ್ಟ ಕೆಲಸಗಳನ್ನು ನಾನು ಇಲ್ಲಿಂದಲೇ ನಿಭಾಯಿಸುತ್ತಿದ್ದೇನೆ. ಹಾಗಾಗಿ ಕುಟುಂಬದಿಂದ ದೂರವಿರುವುದು ನನಗೆ ಹೊರೆ ಅನ್ನಿಸಿಲ್ಲ.”

ಯಲ್ಲಪ್ಪ ಹಂದ್ರಾಳ್: ಈ ಪಾದಯಾತ್ರೆ ಹಿಂದೆ ಯಾವುದಾದರೂ ಅಜೆಂಡಾ ಇದೆಯಾ?
ವಿವೇಕಾನಂದ ಹೆಚ್.ಕೆ: ಸಾಮಾಜಿಕ ಪರಿವರ್ತನೆ ನನ್ನ ಮೂಲ ಉದ್ದೇಶ. ಅದು ರಾಜಕೀಯವಾಗಿ, ಧಾರ್ಮಿಕವಾಗಿ ಹೇಗಾದರೂ ಆಗಲಿ. ಒಟ್ಟಿನಲ್ಲಿ ನನ್ನ ಕಾಲದಲ್ಲೇ ಆಗಬೇಕು. ನಾನು ಆ ಬದಲಾವಣೆಯನ್ನು ಕಾಣಬೇಕು. ಆ ಅಜೆಂಡಾ ಮಾತ್ರ ಇದೆ. ಈಗ ಸದ್ಯದಲ್ಲಿ ನಾನು ಅಂತರಂಗದ ಚಳುವಳಿಯನ್ನು ಮಾಡುತ್ತಿದ್ದೇನೆ. ಆದರೆ ಅಷ್ಟೇ ಮಾತ್ರ ಆದರೆ ಏನೇನೂ ಸಾಧ್ಯವಾಗುವುದಿಲ್ಲ. ಅದಕ್ಕೆ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಸುಧಾರಣೆ ಆಗಬೇಕು. ಅಧಿಕಾರ ಇರದೆ ಕೇವಲ ಮಾತಿನ ಮುಖಾಂತರ ಇದು ಸಾಧ್ಯವಾಗುವುದಿಲ್ಲ. ಆಡಳಿತಾತ್ಮಕ ಸುಧಾರಣೆಯಾದರೆ ಮಾತ್ರ ಸಮಾಜದ ಸುಧಾರಣೆ ಆಗುತ್ತದೆ. ಆ ರೀತಿಯ ಅಜೆಂಡಾದ ಬಗ್ಗೆ ಮಾತನಾಡಲು ಈ ಸದ್ಯದ ಸ್ಥಿತಿಯಲ್ಲಿ ನಾನು ತುಂಬಾ ಚಿಕ್ಕವ.

ಯಲ್ಲಪ್ಪ: ಈಗ ನಿಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಸುಮಾರು 30 ಪರ್ಸೆಂಟ್ ಆಗಿದೆ ಅನ್ಸುತ್ತೆ. ಇನ್ನು ಉಳಿದ ಯಾತ್ರೆಯನ್ನು ಮಾಡಲು ನಿಮ್ಮಿಂದ ಸಾಧ್ಯವಾಗುತ್ತದೆಯೇ? ಆ ಭಾವ ಮತ್ತು ಧೈರ್ಯ ನಿಮ್ಮಲ್ಲಿದೆಯೇ?
ವಿವೇಕಾನಂದ ಹೆಚ್.ಕೆ: ನಾನು ತುಂಬಾ ದೂರಕ್ಕೆ ವಿಚಾರ ಮಾಡುತ್ತಿಲ್ಲ. ಈಗ ಮೂರು- ಮೂರು ದಿನಗಳ ಲೆಕ್ಕ ಹಾಕಿಕೊಂಡು ಹೋಗುತ್ತಿದ್ದೇನೆ. ಬೆಳಗಾವಿ ಅತಿ ದೊಡ್ಡ ಜಿಲ್ಲೆ. ಅಲ್ಲಿ ಕಾಡು, ಕಾಡುಪ್ರಾಣಿಗಳ ಕಾಟ ತುಂಬಾ ಇದೆ ಎಂಬ ಭಯವೂ ಇದೆ. ಹಾಗಾಗಿ ಕೇವಲ ಮೂರು ದಿನಕ್ಕೆ ನಾನು ಎಷ್ಟು ಕ್ರಮಿಸಬಹುದು ಅಷ್ಟನ್ನು ಮಾತ್ರ ವಿಚಾರಮಾಡಿ ಪ್ಲಾನ್ ಮಾಡಿ ಹೋಗುತ್ತಿದ್ದೇನೆ. ಜೊತೆಗೆ ಜನರ ಪ್ರೋತ್ಸಾಹ, ಪ್ರೀತಿ ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡುತ್ತಿದೆ. ಹಾಗಾಗಿ ಪೂರ್ಣಗೊಳಿಸಬಹುದೆಂಬ ಆಕಾಂಕ್ಷೆ ಇದೆ.

ಯಲ್ಲಪ್ಪ ಹಂದ್ರಾಳ್: ಹೋದಲ್ಲೆಲ್ಲ ಏನಾದರೂ ಸಂಪರ್ಕ ಮಾಧ್ಯಮ ಅಥವಾ ಸಮಿತಿಯನ್ನು ಏನಾದರೂ ಮಾಡುವ ಕೆಲಸ ಮಾಡುತ್ತಿದ್ದೀರಾ?
ವಿವೇಕಾನಂದ ಹೆಚ್.ಕೆ: ಹೌದು. ನಾನು ಹೋದಲ್ಲೆಲ್ಲಾ ಸ್ನೇಹಿತರ ಸಂಪರ್ಕಕ್ಕಾಗಿ ವಾಟ್ಸಾಪ್ ಗುಂಪು ರಚಿಸುತ್ತಾ ಬಂದಿದ್ದೇನೆ. ಜೊತೆಗೆ ಒಂದು ‘VHK ಪಾದಯಾತ್ರೆ’ ಎಂಬ ಗ್ರೂಪನ್ನು ಮತ್ತು ಅದೇ ಹೆಸರಿನ ಪೇಜ್ ನ್ನು ರಚಿಸಿದ್ದೇನೆ. ನಾನು ಮುಂದೆ ಹೋದಂತೆಲ್ಲ ನನ್ನ ಫೋಟೋಗಳನ್ನು, ಮಾಹಿತಿಯನ್ನು ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡುತ್ತಾ ಸಾಗುತ್ತಿದ್ದೇನೆ. ಅವರು ಕೂಡ ಅಭಿಪ್ರಾಯ ಸಂವಹನ ಮಾಡುತ್ತಿದ್ದಾರೆ ಹೀಗೆ ಸಂಪರ್ಕ ಸಾಧ್ಯವಾಗುತ್ತಿದೆ.

ಯಲ್ಲಪ್ಪ ಹಂದ್ರಾಳ್: ಹೀಗೆ ಪಾದಯಾತ್ರೆ ಮಾಡಿ ದೊಡ್ಡದನ್ನು ಸಾಧಿಸಿ ಬಿಡುತ್ತೇನೆ, ಮಾತಿನ ಮುಖಾಂತರ ಜನರಲ್ಲಿ ಬದಲಾವಣೆ ತರುತ್ತೇನೆ ಎಂದು ಹೊರಟಿರುವುದು ‘ಹುಚ್ಚುತನ’ ಅಂತಾ ಅನ್ನಿಸಿಲ್ಲವೇ?” ಏಕೆಂದರೆ ಸಾರ್ವಜನಿಕ ಕ್ಷೇತ್ರದಲ್ಲಿ ಈ ಏಕಾಂಗಿ ಅಂತರಂಗ ಚಳವಳಿ ದೊಡ್ಡ ಘಟನೆಯಾಗದು. ನಿಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಮೈಲಿಗಲ್ಲು ಆಗಬಹುದು!
ವಿವೇಕಾನಂದ ಹೆಚ್.ಕೆ: ನಿಮ್ಮ ಪ್ರಶ್ನೆ ಸರಿಯಾಗಿದೆ. ಇದು ಸಾರ್ವಜನಿಕ ರಂಗದಲ್ಲಿ ದೊಡ್ಡ ಘಟನೆ ಆಗದಿದ್ದರೂ ವೈಯಕ್ತಿಕ ಜೀವನದ ದೊಡ್ಡ ದಾಖಲೆಯಾಗುತ್ತದೆ. ನಾನು ಬೆಂಗಳೂರಿನಲ್ಲಿ ಇದ್ದಿದ್ದರೆ ಈಗ ಏನು ಮಾಡುತ್ತಿದ್ದೆ? ಸಾಧಾರಣ ಜೀವನ ನಡೆಸುತ್ತಿದ್ದೆ ಅಷ್ಟೇ. ಅದನ್ನು ಹೋಲಿಸಿಕೊಂಡರೆ ಈಗ ನಾನು ಮಾಡುತ್ತಿರುವುದು ಇದು ದೊಡ್ಡ ಕೆಲಸವೇ ಎಂದು ನನಗನಿಸಿದೆ. ಏನಾದರೂ ಸಾಧಿಸಬೇಕೆಂದರೆ ಇಂತಹ ಸಾಹಸ ಮಾಡಲೇಬೇಕಾಗುತ್ತದೆ. ಹಾಗಾಗಿ ಇದು ಹುಚ್ಚುತನ ಅಂತಾ ಅನಿಸಿಲ್ಲ .

ಯಲ್ಲಪ್ಪ ಹಂದ್ರಾಳ್: ಯಾರಾದರೂ ಆಗಂತುಕರು, ಅಪರಿಚಿತರಿಂದ ಬೆದರಿಸುವ ಅಥವಾ ಖುಷಿ ಪಡುವ ಅಚ್ಚರಿ ಘಟನೆಗಳೇನಾದರೂ ಸಂಭವಿಸಿವೆಯೇ?
ವಿವೇಕಾನಂದ ಹೆಚ್.ಕೆ: ಭಯಪಡುವ ಪ್ರಸಂಗಗಳು ಆಗಿಲ್ಲ. ಆದರೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರ ವಿವಿಧ ಸ್ಥರದ ಕಿರಿಯ ಹಿರಿಯ ಅಧಿಕಾರಿಗಳು ಊಟವನ್ನು ತಂದು ಕೊಟ್ಟಿದ್ದಾರೆ. ಇಂತಹ ಮಾನವೀಯ ಕಾರ್ಯಗಳನ್ನು ಕಂಡು ಖುಷಿಯಾಗಿದೆ ಮನ ತುಂಬಿ ಬಂದಿದೆ.

ಯಲ್ಲಪ್ಪ ಹಂದ್ರಾಳ್: ನಿಮ್ಮ ಮುಂದಿನ ಪ್ರಯಾಣ, ಪಾದಯಾತ್ರೆ ಯಶಸ್ಸು ಕಾಣಲಿ ಹಾಗೂ ನಿಮ್ಮ ಪ್ರವಾಸದ ಪ್ರಮುಖ ಉದ್ದೇಶ ಈಡೇರಲಿ ಎಂಬ ಹಾರೈಕೆಯೊಂದಿಗೆ ಶುಭ ಕೋರುತ್ತೇನೆ.
ಶುಭವಾಗಲಿ ಸರ್.ಹ್ಯಾಪಿ ಜರ್ನಿ.”
*****