ಅನುದಿನ ಕವನ:೯೨. ಕವಿ:ಡಾ.ಸತ್ಯಮಂಗಲ ಮಹಾದೇವ, ಕವನದ ಶೀರ್ಷಿಕೆ:ನಗಬೇಕು

ಡಾ. ಸತ್ಯಮಂಗಲ ಮಹಾದೇವ
—-
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ವರ್ಷದ ಪುಸ್ತಕ ಬಹುಮಾನ ಪುರಸ್ಕಾರ ಪಡೆಯುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಡಾ. ಸತ್ಯಮಂಗಲ ಮಹಾದೇವ ಅವರು ಗುರುತಿಸಿಕೊಂಡಿದ್ದಾರೆ.
ಮಹಾದೇವ ಬುಟ್ಟಿ ಹೆಣೆಯುವ ಅಲೆಮಾರಿ ಬಡ ಕುಟುಂಬದ
ರಾಜಣ್ಣ ಮತ್ತು ಜಯಮ್ಮ ದಂಪತಿಗಳ ಒಡಲ ಕುಡಿ.
ವಿದ್ಯಾರ್ಥಿ ದೆಸೆಯಲ್ಲೇ ಹೋರಾಟ, ಪ್ರಗತಿಪರ ವಿಚಾರಧಾರೆ ವ್ಯಕ್ತುತ್ವ ರೂಪಿಸಿಕೊಂಡವರು.
ಕಡುಬಡತನ, ಶೋಷಣೆ ಲೆಕ್ಕಿಸದೇ ಕಷ್ಟಪಟ್ಟು ವಿದ್ಯೆಯನ್ನು ದಕ್ಕಿಸಿಕೊಂಡವರು. ಸ್ವಾಭಿಮಾನಿ ಮಹಾದೇವ ಅವರು ಬೆಂಗಳೂರಿನಲ್ಲಿ ಬದುಕು ರೂಪಿಸಿ ಕೊಳ್ಳುವಾಗ ತಳ್ಳುವ ಬಂಡಿಯಲ್ಲಿ ತರಕಾರಿ ಮಾರಲು ಹಿಂದೆ ಮುಂದೆ ನೋಡಲಿಲ್ಲ. ಈ ಸಂದರ್ಭದಲ್ಲೇ ಹಿರಿಯ ಕವಿ ಸುಬ್ಬು ಹೊಲೆಯಾರ ಅವರ ಕಣ್ಣಿಗೆ ಬಿದ್ದರು. ಬಳಿಕ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅವರ ಪರಿಚಯವಾಯ್ತು. ಹಿರಿಯರ ಮಾರ್ಗದರ್ಶನ ಸಿಕ್ಕಿದ್ದರಿಂದ ಇವರ ಬದುಕು, ಬರವಣಿಗೆ ಎಲ್ಲವೂ ಚೆಂದವಾಗುತ್ತಾ ಹೋಯ್ತು.
ಬೆಂಗಳೂರು
ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ.ಎಸ್ಸಿ, ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಪ್ರಥಮ ಶ್ರೇಣಿ
ಪಡೆದು ತಮ್ಮ ಪ್ರೀತಿಯ ಅದ್ಯಾಪಕ ವೃತ್ತಿಯನ್ನು
ಒಪ್ಪಿಕೊಂಡು ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಪ್ರೀತಿ ಗಳಿಸಿದವರು. ಅಧ್ಯಾಪಕ ವೃತ್ತಿ ಮಾಡುತ್ತಲೇ
“ಬೇಂದ್ರೆ ಮತ್ತು ಮಧುರ ಚೆನ್ನರ ಕಾವ್ಯಗಳಲ್ಲಿ ಅನುಭಾವ : ತೌಲನಿಕ ಅಧ್ಯಯನ ” ದ ಮೇಲೆ ಡಾಕ್ಟರೇಟ್ ಪಡೆದ ಡಾ. ಮಹಾದೇವ ಪ್ರಸ್ತುತ ಬೆಂಗಳೂರಿನ
ಪ್ರತಿಷ್ಠಿತ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಡಾ. ಸತ್ಯಮಂಗಲ ಮಹಾದೇವ ಅವರ ‘ನಗಬೇಕು’ ಕವಿತೆ ಪಾತ್ರವಾಗಿದೆ.👇

ನಗಬೇಕು.
—————–

ಮಾತಿಗೊಮ್ಮೆ ತುಟಿಬಿಡಿಸಿ
ಹಂಗಿಸುವವರೆದುರು
ಹಂಗುಹರಿಯದಿರುವಂತೆ
ಮತ್ತೆ ಹಗೆ ಹೊಮ್ಮದಿರುವಂತೆ
ಬಿಗಿದ ಮುಖ ಬಿಡಿಸುವಂತೆ ನಗಬೇಕು

ಕಾದ ಹಂಡೆಯಂತಾದ ಮುಖದೆದುರು
ಕಟ್ಟೆಯೊಡೆದ ಕಿಚ್ಚು ಹೊಟ್ಟೆಯೊಡಯದಿರುವಾಗ
ಕೆಂಪೇರಿದ ಕಣ್ಣುಗಳು ಎದುರು ಬಂದಾಗೊಮ್ಮೆ
ಶಾಂತಿಯ ಬಯಸಿ ನಗಬೇಕು

ನೀರ ಸೆಲೆಯಂತೆ ಹರಿವ ಮುಖಭಾವದೆದುರು
ಹೂವಿನಂತೆ
ಕಟಕಟನೆ ಮಸೆದ ಹಲ್ಲಿಗೆ ಮುಲಾಮಿನಂತೆ
ಅಸೂಯೆಯ ಉಲ್ಕಾಪಾತವ ಸುರಿಸಿದ ಕರುಳುಗಳು
ಜೀವ ಬುಸುಗುಡುವಂತೆ ಅಬ್ಬರಿಸಿದಾಗ
ನೀರು ಹರಡುವ ಪೆಸೆಯಂತೆ ಆವರಿಸಿ ನಗಬೇಕು

ಸಂತೆಯೊಳಗೆ ಮಣಬಾರವ ಎಳೆವ ಎತ್ತುಗಳ
ನೊಗದ ಬಾರದಲಿ ಸಂಕಟವು ಕರಗಲೆಂದು
ಯೇಸು ಬಯಸಿದ ಪ್ರೇಮದಂತೆ ನಗಬೇಕು

ದುಃಖದಾ ಮನೆಯೊಳಗೆ
ಕಂಗಾಲಾದ ಮುಖಗಳೆದುರು
ಭರವಸೆಯ ಚೆಲುವಂತೆ ನಗಬೇಕು

ಯಶದ ಉತ್ತುಂಗದಲಿ ಜಿಗಿವ ಮನದಲಿ
ಸಂತಸವು ಸದಾ ಹಸುರಾಗಿರುವಂತೆ
ನವಿರಾಗಿ ನಲಿವಂತೆ ನಗಬೇಕು

ಸಂಜೆ ಜೀವನದ ಸವಿಬಾಗಿಲಲಿ ನಿಂತ
ಸುಕ್ಕುಗಟ್ಟಿದ ಚರ್ಮ
ಬೆಚ್ಚಗೆ ಖುಷಿ ಪಡುವಂತೆ
ಪ್ರೇಮತುಂಬಿದ ಮಮತೆ ನಗಬೇಕು

ಕಪಟ ಮೂಡಿರದ ಹಸುಕಂದನನು ನೋಡಿ
ಮುಗ್ಧತೆಯ ಬಸಿಯು ಹಾರದಿರಲೆಂದು
ತಂಪು ತಂಗಾಳಿಯ ಸವಿಯೇ ತಾನಾಗುವಂತೆ ನಗಬೇಕು

ಬಾಳು ಸಂಕಟಗಳ ಮೂಸೆ
ಹೊರಾಂಗಣದಲಿ ಮರಣದಾ ಜಿಗಿತವಿದೆ
ಒಳಿತು ಒಳಗೊಳ್ಳುವ ಕದನದಲಿ
ಬುದ್ಧನ ಮಂದಸ್ಮಿತದಂತೆ ನಗಬೇಕು

ಕಲ್ಲೆಸೆದ ಕೈ ಹೂವಾಗಲೆಂದು
ಕಾಮುಕನ ಕಣ್ಣಿಗೆ ವಿವೇಕದ ಸೂಜಿಯಾಗಿ
ತಿವಿಯುವಂತೆ
ಎಡವಿದವನ ಎದೆಯ ಭರವಸೆಯಂತೆ
ನೆಡೆಯುವವನ‌ ಕಾಲಿನ ಭಲವಾಗಿ
ಬಡವನಾ ಮಾತಿನ ಚೆಲುವಿನಂತೆ ನಗಬೇಕು

ಸಾವು ಎಡತಾಕಿ ಮಡುವಾಗಿ
ತನ್ನತ್ತ ಸೆಳೆದಾಗ
ಮಹಾ ಮೌನಕೆ ಜಾರಿದ ಎನ್ನ ಮುಖದ ಮೇಲೆ
ಮರೆಯಲಾಗದ ನಗು ಮನೆಮಾಡಿರಬೇಕು.

– ಡಾ. ಸತ್ಯಮಂಗಲ ಮಹಾದೇವ, ಬೆಂಗಳೂರು
*****