ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಎಂಟು ನಾಮಪತ್ರಗಳು ಕ್ರಮಬದ್ಧ -ಸಹಾಯಕ ಚುನಾವಣಾಧಿಕಾರಿ ಶಿವಲಿಂಗಾರೆಡ್ಡಿ

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಬಳ್ಳಾರಿ‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ  ಸಲ್ಲಿಕೆಯಾಗಿದ್ದ ಎಂಟು ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಕಸಾಪ ಸಹಾಯಕ ಚುನಾವಣಾಧಿಕಾರಿ ಶಿವಲಿಂಗಾ ರೆಡ್ಡಿ ಅವರು ತಿಳಿಸಿದರು.
ಗುರುವಾರ ಕಸಾಪ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ರೆಹಮಾನ್ ಪಾಶಾ ಅವರ ಸಮ್ಮುಖದಲ್ಲಿ ನಾಮಪತ್ರಗಳನ್ನು ಪರಿಶೀಲಿಸಿದ ಬಳಿಕ ಅವರು ಘೋಷಿಸಿದರು.
ಏ.12 ರಂದು ಸೋಮವಾರ ನಾಮಪತ್ರಗಳನ್ನು ವಾಪಾಸು ಪಡೆಯಬಹುದಾಗಿದ್ದು ಅಭ್ಯರ್ಥಿಗಳೇ ಖುದ್ದಾಗಿ  ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಮುಂದೆ ಪತ್ರಕ್ಕೆ ಸಹಿಮಾಡಬೇಕು ಎಂದರು.
 ಈ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಪ್ರಕಾಶಕ ಸಿ.ಮಂಜುನಾಥ್, ಕಸಾಪ‌ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ರಂಗಕರ್ಮಿ ಕೆ. ಜಗದೀಶ್, ಲೇಖಕಿ ವಿನೋದ ಕರ್ಣಂ,  ಪಂಪಾಪತಿ ಟಿ ಎಂ ಇದ್ದರು.
ನಾಮಪತ್ರ ಪರಿಶೀಲನಾ ಸಭೆಗಳ ಬಳಿಕ ಚುನಾವಣಾಧಿಕಾರಿ(ತಹಶೀಲ್ದಾರರ) ಕಚೇರಿ ಹೊರಗೆ ಒಟ್ಟು ಐದು ಜನ ಸ್ಪರ್ಧಿಗಳು ಒಟ್ಟಿಗೆ ನಿಂತು ಪತ್ರಿಕಾ ಛಾಯಾಗ್ರಾಹಕರತ್ತ ನಗೆ ಬೀರಿ ಸೌಹಾರ್ದ ಮೆರೆದಿದ್ದು ಗಮನಸೆಳೆಯಿತು.
*****.
*****.