ಮನರೇಗಾ ಪರಿಣಾಮಕಾರಿ ಅನುಷ್ಠಾನ: ಅತ್ಯುತ್ತಮ ಜಿಪಂ ಪ್ರಶಸ್ತಿ ಸ್ವೀಕರಿಸಿದ ಬಳ್ಳಾರಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ

ಹುಬ್ಬಳ್ಳಿ: 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯತಿ ಪ್ರಶಸ್ತಿಗೆ ಪಾತ್ರವಾಗಿದೆ.
ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮತ್ತು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಳ್ಳಾರಿ ಜಿಪಂ ನೇತೃತ್ವ ವಹಿಸಿರುವ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರಿಗೆ ಪ್ರಶಸ್ತಿ ವಿತರಿಸಿ ಶಹಾಬ್ಬಾಷ್‍ಗಿರಿ ನೀಡಿದರು. ಬಳ್ಳಾರಿ ಜಿಪಂ ಹಾಲಿ ಸಿಇಒ ನಂದಿನಿ ಕೆ.ಆರ್ ಅವರು ಇದ್ದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮನರೇಗಾ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಸೇರಿದಂತೆ ಇನ್ನೀತರರು ಇದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಮನರೇಗಾದಡಿಯಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯ ವಿಚಾರ. ರಾಜ್ಯದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಇಲ್ಲದೇ ಇರುವ ಈ ರೀತಿಯ ಪ್ರಶಸ್ತಿ ಸ್ವೀಕರಿಸಿ ಸನ್ಮಾನಿಸಿಕೊಳ್ಳುವ ಅವಕಾಶ ನನಗೆ ಬಂದಿರುವುದು ನನ್ನ ಸುದೈವ. ಮನರೇಗಾ ಅನುಷ್ಠಾನದಲ್ಲಿ ಉತ್ತಮ ಸ್ಪಂದನೆ ನೀಡಿದ ಜಿಲ್ಲೆಯ ಗ್ರಾಮೀಣ ಜನತೆಗೆ, ಜಿಪಂ, ತಾಪಂ, ಗ್ರಾಪಂ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿವೆ ಎಂದರು.
ಈ ಪ್ರಶಸ್ತಿಗೆ ಭಾಜನರಾದ ಜಿಪಂ ಡಿಎಂಐಎಸ್ ಶಿವಪ್ರಸಾದ್, ತಾಪಂ ಇಒ ಬಸಪ್ಪ, ಐಇಸಿ ಸಂಯೋಜಕರಾದ ಫಜಿಲ್ ಅಹಮ್ಮದ್, ತಾಂತ್ರಿಕ ಸಂಯೋಜಕರಾದ ವಿಜಯ್ ಮಹಾಂತೇಶ್,ಅಲಬೂರು ಗ್ರಾಪಂ ಪಿಡಿಒ ಮಾಧವಿ ಅವರ ಕಾರ್ಯವಿಧಾನದ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ವಿಶೇಷ ಅಭಿನಂದನೆಗಳನ್ನು ತಿಳಿಸಿದರು.