ಬಳ್ಳಾರಿ: ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜತೆ ಪತ್ರಿಕಾ ರಂಗವೂ ಪ್ರಮುಖವಾಗಿದೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ತಿಳಿಸಿದರು.
ಪತ್ರಿಕಾ ಭವನದಲ್ಲಿ ಈಚೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರಿಗೆ ಹಮ್ಮಿಕೊಂಡಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸರಕಾರ, ಜನಪ್ರತಿನಿಧಿಗಳ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸುದ್ದಿ ಪ್ರಕಟಿಸುವುದರ ಜತೆ ಇವರ ವೈಫಲ್ಯ, ತಪ್ಪುಗಳ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದು ಪತ್ರಕರ್ತರಿಗೆ ಸಲಹೆ ನೀಡಿದರು.
ಪತ್ರಿಕಾ ರಂಗದಲ್ಲಿ ದುಡಿಯುವ ಪ್ರತಿಯೊಬ್ಬ ಪತ್ರಕರ್ತರಿಗೂ ಸರ್ಕಾರದ ಸವಲತ್ತು ಸಿಗಬೇಕು. ಈ ದಿಸೆಯಲ್ಲಿ ಬಳ್ಳಾರಿಯ ಪತ್ರಕರ್ತರಿಗೆ ಉಚಿತವಾಗಿ ವಿವಿಧ ಯೋಜನೆಗಳಡಿ ಮನೆಗಳನ್ನು ನಿರ್ಮಿಸುವ ಚಿಂತನೆ ಇದೆ ಎಂದು ಶಾಸಕರು ಭರವಸೆ ನೀಡಿದರು.
ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಒಳಚರಂಡಿ ಮಂಡಳಿ ಸಹಯೋಗದಲ್ಲಿ ಅರ್ಹ ಪತ್ರಕರ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದಲ್ಲಿ ಸುಮಾರು 15 ಸಾವಿರ ಪತ್ರಕರ್ತರಲ್ಲಿ 1500 ಪತ್ರಕರ್ತರಿಗೆ ಮಾತ್ರ ಸರಕಾರ ಮಾನ್ಯತೆ ಕಾರ್ಡುಗಳನ್ನು ನೀಡಲಾಗಿದೆ ಎಂದು ವಿಷಾಧಿಸಿದರು.
ಕೇವಲ ಮಾನ್ಯತೆ ಕಾರ್ಡು ಇರುವವರು ಮಾತ್ರ ಪತ್ರಕರ್ತರಲ್ಲ. ಭೇದ ಭಾವ ಮಾಡದೇ ಎಲ್ಲರಿಗೂ ಮಾನ್ಯತಾ ಪತ್ರಗಳನ್ನು ನೀಡಬೇಕು ಎಂದುಬೊತ್ತಾಯಿಅಇದರು.
ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ರೂಪಿಸುತ್ತದೆ. ಅದರಲ್ಲಿ ಅದೆಷ್ಟೋ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹಣ ಪೋಲಾಗುತ್ತಿದೆ. ರಾಜ್ಯದ ಎಲ್ಲ ಪತ್ರಕರ್ತರಿಗೆ ಮಾನ್ಯತೆ ಪತ್ರಗಳನ್ನು ನೀಡಿದರೆ ನಷ್ಟವೇನೂ ಇಲ್ಲ. ಉಚಿತ ಬಸ್ ಪಾಸ್, ನಿವೇಶನ, ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರಕ್ಕೆ ಸಂಘ ಮನವಿ ಮಾಡಿದೆ ಎಂದರು. ವೈಯಕ್ತಿವಾಗಿಯೂ . ಪತ್ರಕರ್ತರ ಒಳಿತಿಗಾಗಿ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಮಾತನಾಡಿ, ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜತೆ ಇತರೆ ಪತ್ರಕರ್ತರಿಗೂ ಆರೋಗ್ಯ ಕಾರ್ಡುಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಪತ್ರಕರ್ತರಾದ ಬಜಾರಪ್ಪ, ಎಂ.ಇ ಜೋಷಿ ಮತ್ತಿತರರು ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಜಗನ್ಮೋಹನ ರೆಡ್ಡಿ, ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್ ಮೋತ್ಕರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ವೇಣಿ ಲೋಕನಾಥ್ ಅವರನ್ನು ಗೌರವಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿಂಗಾಪುರ ನಾಗರಾಜ್, ಪದಾಧಿಕಾರಿಗಳು, ಸದಸ್ಯರು, ವಿವಿಧ ಪತ್ರಿಕಾ ಮಾಧ್ಯಮಗಳ ವರದಿಗಾರರು ಇದ್ದರು.
ಪತ್ರಕರ್ತ ಸಿದ್ಧರಾಮ ಸಿರಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ವೆಂಕಟೇಶ್ ದೇಸಾಯಿ ಸ್ವಾಗತಿಸಿದರು. ವೀರೇಶ್ ಕರೂರು ವಂದಿಸಿದರು.
*****