ಮಾಧ್ಯಮ ಲೋಕ-೧೦. ಅಂಕಣಕಾರರು: ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಕೋವಿಡ್-19 ಮತ್ತು ಭಾರತದ ಆರ್ಥಿಕತೆಯ ನಿಜಾಂಶಗಳು
-ಡಾ.ಅಮ್ಮಸಂದ್ರ ಸುರೇಶ್

ಕೋವಿಡ್-19ರ ಹರಡುವಿಕೆಯ ಆರಂಭದಲ್ಲಿ ಭಾರತವು ದೀರ್ಘಕಾಲೀನ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಾವಧಿಯ ನೋವನ್ನು ತಡೆದುಕೊಳ್ಳುವ ಮೂಲಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸುವತ್ತ ಗಮನಹರಿಸಿತು. ಇದಕ್ಕಾಗಿ ತೆಗೆದುಕೊಂಡ ಲಾಕ್ ಡೌನ್ ನಂತಹ ಕ್ರಮಗಳು ಕೆಲವರಿಗೆ ತಾತ್ಕಾಲಿಕವಾಗಿ ಕಷ್ಟಕರ ನೋವನ್ನು ಉಂಟು ಮಾಡಿದ್ದರೂ ಕೂಡ ಭವಿಷ್ಯದ ದೃಷ್ಟಿಯಿಂದ ಇಂತಹ ಕ್ರಮಗಳು ಸ್ವಾಗತಾರ್ಹ ಕ್ರಮಗಳೇ ಆಗಿದ್ದವು. ತ್ವರಿತ ಹಾಗೂ ತೀವ್ರವಾದ ಲಾಕ್ ಡೌನ್ ಕ್ರಮಗಳು ಜೀವಗಳನ್ನು ಉಳಿಸುವ ಮೂಲಕ ಮಧ್ಯಮದಿಂದ ದೀರ್ಘಾವಧಿಯವರೆಗೂ ಆರ್ಥಿಕ ಚೇತರಿಕೆಯ ಮೂಲಕ ಜೀವನೋಪಾಯವನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಭಾರತವು ತೆಗೆದುಕೊಂಡ ಈ ಕ್ರಮಗಳು ಕೋವಿಡ್ ಹರಡುವಿಕೆಯ ಗರಿಷ್ಠ ಪ್ರಮಾಣವನ್ನು ಸೆಪ್ಟೆಂಬರ್ 2020ರ ವೇಳೆಗೆ ಕಡಿಮೆ ಮಾಡಿತು. ಆದರೆ ಇದೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು ಕಳೆದ ತಿಂಗಳಿನಿಂದ ಕೋವಿಡ್-19 ಪ್ರಕರಣಗಳಲ್ಲಿ ಮತ್ತೆ ಹಚ್ಚಳ ಕಂಡು ಬರುತ್ತಿದೆ.
ಆರ್ಥಿಕವಾಗಿ ನೋಡಿದರೆ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9ರಷ್ಟು ಕುಸಿತವನ್ನು ದಾಖಲಸಿತ್ತು. ಇದಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಈ ಕುಸಿತ ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಕಂಡು ಜಿಡಿಪಿಯು 7.5ರಷ್ಟು ಅಲ್ಪ ಪ್ರಮಾಣದ ಕುಸಿತವನ್ನು ದಾಖಲಿಸಿತು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಕೋವಿಡ್-19, ಬೇಡಿಕೆ ಮತ್ತು ಪೂರೈಕೆ ಎರಡರ ಮೇಲೂ ಪರಿಣಾಮ ಬೀರಿತು. ಆದರೆ ಸರ್ಕಾರ ಮಧ್ಯಮ ಮತ್ತು ದೀರ್ಘಕಾಲೀನ ಪೂರೈಕೆಯನ್ನು ವಿಸ್ತರಿಸಲು ಮತ್ತು ಉತ್ಪಾದಕ ಸಾಮರ್ಥ್ಯಗಳಿಗೆ ದೀರ್ಘಕಾಲೀನ ಹಾನಿಯನ್ನು ತಪ್ಪಿಸಲು ಹಲವಾರು ಸುಧಾರಣ ಕ್ರಮಗಳನ್ನು ಜಾರಿಗೆ ತಂದಿತು. ಬೇಡಿಕೆಯ ನೀತಿಗಳನ್ನು ಸರಿಪಡಿಸುವುದಕ್ಕಾಗಿ ಆರ್ಥಿಕ ಚಟುವಟಿಕೆಗಳ ಮೇಲಿನ ಬ್ರೇಕ್ ತೆಗೆಯುವ ಮೂಲಕ ಆರ್ಥಿಕ ಚೇತರಿಕೆಗೆ ಚಾಲನೆ ನೀಡಲಾಯಿತು. ಮಾಸಿಕ ಜಿ ಎಸ್ ಟಿ ಸಂಗ್ರಹವು ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಏರಿಕೆ ಕಂಡಿದ್ದು ಇದು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತಿದೆ. ಜೆಎಸ್ಟಿ ಜಾರಿಗೆ ತಂದ ನಂತರ ಸಂಗ್ರಹಣೆ 2020ರ ಡಿಸೆಂಬರ್ ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿತು.
ಕಳೆದ ವರ್ಷದಿಂದೀಚೆಗೆ ಆನ್ ಲೈನ್ ಕಲಿಕೆ, ಮನೆಯಿಂದಲೇ ಕೆಲಸ ಮಾಡುವುದರಿಂದ ಡೇಟಾ ನೆಟ್ ವರ್ಕ್, ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಪೋನ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಆಗಮನ ಹೆಚ್ಚಾಯಿತು. ಮಹಾತ್ಮಗಾಂಧಿ ಎನ್ ಆರ್ ಇ ಜಿ ಎ ಅಡಿಯಲ್ಲಿ ವಿತರಿಸಲಾಗುವ ವೇತನವನ್ನು ಏಪ್ರಿಲ್,2020 ರಿಂದ 182 ರೂಪಾಯಿಗಳಿಂದ 202 ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಗ್ರಾಮೀಣರ ಬದುಕನ್ನು ಉತ್ತಮಗೊಳಿಸುವ ಪ್ರಯತ್ನವನ್ನು ಮಾಡಲಾಯಿತು. ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 20.64 ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಸುಮಾರು ಎಂಟು ಕೋಟಿ ಕುಟುಂಬಗಳಿಗೆ ತಲಾ 500ರೂ.ಗಳನ್ನು ಮೂರು ತಿಂಗಳವರೆಗೂ ವಿತರಿಸಿದ್ದಲ್ಲದೆ ಗ್ಯಾಸ್ ಸಿಲಿಂಡರ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕೋವಿಡ್-19 ಕೇವಲ ಭಾರತದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮಗಳನ್ನು ಬೀರಲಿಲ್ಲ. ಬದಲಾಗಿ ಇಡೀ ಜಾಗತಿಕ ಆರ್ಥಿಕತೆಯನ್ನೆ ತಲ್ಲಣಗೊಳಿಸಿತು. ಎನ್ ಎಸ್ ಓ ಅಂದಾಜಿನ ಪ್ರಕಾರ 2021ನೇ ಹಣಕಾಸು ವರ್ಷದಲ್ಲಿ (-)7.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ. 2021ನೇ ಹಣಕಾಸು ವರ್ಷದ ಮೊದಲ ಅರ್ಧ ವಾರ್ಷಿಕಕ್ಕೆ ಹೋಲಿಸಿದರೆ ಎರಡನೇ ಅರ್ಧವಾರ್ಷಿಕದಲ್ಲಿ 23.9ರಷ್ಟು ದೃಡವಾದ ಬೆಳವಣಿಗೆಯನ್ನು ಕಂಡಿದೆ. 2021-2022ನೇ ಹಣಕಾಸು ವರ್ಷದ ದ್ವಿತಿಯಾರ್ಧದಲ್ಲಿ ಸರ್ಕಾರಿ ಬಳಕೆಯಿಂದ ಚೇತರಿಕೆ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಮತ್ತು ಇದೇ ಹಣಕಾಸು ವರ್ಷದಲ್ಲಿ ಭಾರತವು ಆಧ್ಯತೆಯ ಹೋಡಿಕೆಯ ತಾಣವಾಗಿ ಹೊರಹೊಮ್ಮಿತು. ಜಾಗತಿಕವಾದ ಆಸ್ತಿ ಬದಲಾವಣೆಗಳ ನಡುವೆಯೂ ಈಕ್ವಿಟಿಗಳು ಮತ್ತು ಉದಯೋನ್ಮಖ ಆರ್ಥಿಕತೆಯಲ್ಲಿ ಎಪ್ ಡಿ ಐ ಒಳ ಹರಿವಿನಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳುವ ನಿರೀಕ್ಷೆಗಳಿವೆ. 2020ರಲ್ಲಿ ಈಕ್ವಿಟಿ ಎಫ್ ಐ ಐ ಒಳಹರಿವು ಪಡೆದ ಜಗತ್ತಿನ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2020ರ ನವೆಂಬರ್ ನಲ್ಲಿ ನಿವ್ವಳ ಎಫ್ ಪಿ ಐ ಒಳಹರಿವು 9.8 ಶತಕೋಟಿ ಡಾಲರ್ ದಾಖಲಿಸುವ ಮೂಲಕ ಅತಿ ಹೆಚ್ಚು ಸಾರ್ವಕಾಲಿಕ ಮಾಸಿಕ ಒಳಹರಿವು ಎಂಬ ಕೀರ್ತಿಗೆ ಪಾತ್ರವಾಯಿತು.
ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಆರ್ಥಿಕ ಫಲಿತಾಂಶಗಳ ಅಸಮಾನತೆಯ ಪಲಿತಾಂಶಗಳ ನಡುವಿನ ಸಂಬಂಧವು ಭಾರತದಲ್ಲಿ ಮುಂದುವರೆದ ಆರ್ಥಿಕತೆಗಳಿಗಿಂತ ಭಿನ್ನವಾಗಿತ್ತು. ಆರ್ಥಿಕ ಬೆಳವಣಿಗೆಯ ಅಸಮಾನತೆಗಿಂತ ಬಡತನ ನಿವಾರಣೆಯ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರಿವೆ. ಬಡವರನ್ನು ಬಡತನದಿಂದ ಮೇಲಕ್ಕೆತ್ತಲು ಮತ್ತಷ್ಟು ಸದೃಡವಾದ ಆರ್ಥಿಕ ಕ್ರಮಗಳು ಇಂದಿನ ಅವಶ್ಯಕತೆಯಾಗಿದೆ. 2007ರಲ್ಲಿ ವಿಶ್ವ ನಾವೀನ್ಯತೆ ಸೂಚ್ಯಾಂಕವನ್ನು ಆರಂಭಿಸಲಾಯಿತು. ನಂತರ ಭಾರತವು ಮೊದಲ ಬಾರಿಗೆ ಅಗ್ರ-50 ದೇಶಗಳಲ್ಲಿ ಸ್ಥಾನ ಪಡೆಯಿತು. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಥಮ ಸ್ಥಾನ ಮತ್ತು ಮಧ್ಯಮ ಆದಾಯದ ಆರ್ಥಕತೆಯ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನ ಪಡಿದಿದೆ.
ಭಾರತದ ವಿದೇಶೀ ವಿನಿಮಯ ಸಂಗ್ರಹವು ಜನವರಿ 21, 2021ಕ್ಕೆ ಸಾರ್ವಕಾಲಿಕ ಗರಿಷ್ಠ 586.1 ಬಿಲಿಯನ್ ಡಾಲರ್ ಗಳಷ್ಟಿದ್ದು ಇದು ಸುಮಾರು 18 ತಿಂಗಳ ಮೌಲ್ಯದ ಆಮದುಗಳನ್ನು ಒಳಗೊಂಡಿದೆ. ಜಾಗತಿಕ ಅಡೆ-ತಡೆಗಳ ನಡುವೆಯೂ 2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಸೇವಾ ಕ್ಷೇತ್ರಕ್ಕೆ ಎಪ್ ಡಿ ಐ ಒಳ ಹರಿವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.34ರಷ್ಟು ಹೆಚ್ಚಾಗುವ ಮೂಲಕ 23.6 ಬಿಲಿಯನ್ ಯುಎಸ್ ಡಾಲರ್ ಗಳನ್ನು ತಲುಪಿತು. ಮುಖ್ಯವಾಗಿ ಈ ವರ್ಷದ ಆರಂಭಿಕ ಮಾಸಿಕ ಅಂದರೆ ಜನವರಿ 20ರಂದು ನಿಫ್ಟಿ-50 ಮತ್ತು ಬಿ ಎಸ್ ಇ ಸೆನ್ಸೆಕ್ಸ್ ಕ್ರಮವಾಗಿ 14,647 ಮತ್ತು 49,792ರಷ್ಟು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. 2020-21ರ ಅವಧಿಯಲ್ಲಿ ಸ್ಥಿರ ಬೆಲೆಯಲ್ಲಿ 3.4% ರಷ್ಟು ಬೆಳವಣೆಗೆ ಸಾಧಿಸುವ ಮೂಲಕ ಕೋವಿಡ್-19ರ ನಿಯಂತ್ರಣ ಕ್ರಮಗಳ ನಡುವೆಯೂ ಭಾರತದ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳ ವಲಯವು ತನ್ನ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020-21ರಲ್ಲಿ ಜಿಡಿಪಿಯ ಶೇಕಡಾವಾರು ಸಾಮಾಜಿಕ ವಲಯದ ಖರ್ಚು ಹೆಚ್ಚಾಗಿದೆ.
ಆಧಾರ್ ಜೋಡಣೆಯ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಮತ್ತು ತ್ವರಿತವಾಗಿ ಹಣ ವರ್ಗಾವಣೆ, ಜನವರಿ 2021 ರ ವೇಳೆಗೆ ಮೀನುಗಾರರಿಗೆ ಒಟ್ಟು 44,673 ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆ ಮಾಡಿದ್ದು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಜನವರಿ 12, 2021ರ ವೇಳೆಗೆ 90,000 ಕೋಟಿ ಮೌಲ್ಯದ ಕ್ಲೈಮ್ ಗಳನ್ನು ರೈತರಿಗೆ ಪಾವತಿ ಮಾಡಿರುವುದು, ಈರುಳ್ಳಿ ರಫ್ತು ನಿಷೇದವನ್ನು ಜಾರಿಗೆ ತಂದಿದ್ದು, ಈರುಳ್ಳಿ ಸಂಗ್ರಹದ ಮೇಲೆ ಮೀತಿ ಏರಿದ್ದು, ದ್ವಿದಳ ಧಾನ್ಯಗಳ ಆಮದಿನ ಮೇಲಿನ ನಿರ್ಬಂದವನ್ನು ಸಡಿಲಗೊಳಿಸಿದ್ದು, ಆರ್ಥಿಕ ಅನಿಶ್ಚತೆತೆಗಳು ನಡುವೆಯೂ ಚಿನ್ನವನ್ನು ಸುರಕ್ಷತ ಹೂಡಿಕೆಯಾಗಿ ಪರಿಗಣಿಸಲಾಗಿದ್ದು, ಇವೇ ಮೊದಲಾದ ಸುಧಾರಣಾ ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದ್ಚದರೂ ಸಹ ಇನ್ನೂ ಕೆಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಇವುಗಳಲ್ಲಿ ಮುಖ್ಯವಾಗಿ ಸಂಶೋಧನೆ ಮತ್ತು ಅಭಿವೃದ್ದಿ ಮೇಲಿನ ಒಟ್ಟು ಮುಂದುವರೆದ ಅಗ್ರ ಹತ್ತು ಆರ್ಥಿಕತೆಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು ಇದು ಸುಧಾರಣೆಯಾಗಬೇಕಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಆರ್ & ಡಿ ಹೂಡಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಸಲ್ಲಿಸಲಾದ ಒಟ್ಟು ಪೇಟೆಂಟ್ ಗಳ ಪೈಕಿ ಭಾರತೀಯ ನಿವಾಸಿಗಳ ಪ್ರಮಾಣ ಪ್ರಸ್ಥುತ ಶೇ.36 ಆಗಿದ್ದು ಇದು ಹತ್ತು ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಶೇ.62 ಕ್ಕಿಂತ ಕಡಿಮೆಯಾಗಿದ್ದು ಈ ಪ್ರಮಾಣ ಕೂಡ ಹೆಚ್ಚಾಗಬೇಕಿದೆ. ಉತ್ಪಾದನೆಯಲ್ಲಿ ಹೆಚ್ಚಿನ ಸುಧಾರಣೆಯನ್ನು ಸಾಧಿಸಲು, ಸಂಸ್ಥೆಗಳು ಮತ್ತು ವ್ಯವಹಾರಗಳ ಅತ್ಯಾಧುನಿಕ ನಾವೀನ್ಯತೆ ಒಳ ಹರಿವುಗಳ ಕಾರ್ಯಕ್ಷಮತೆಯನ್ನು ಸುಧಾರಿಸುವತ್ತ ಗಮನಹರಿಸಬೇಕಾಗಿದೆ.
ಲಾಕ್ ಡೌನ್, ದೈಹಿಕ ಅಂತರ, ಪ್ರಯಾಣ ಮಾರ್ಗಸೂಚಿಗಳನ್ನು ಮೊದಲ ಹಂತದ ಕೋವಿಡ್-19 ಜಾರಿಗೆ ತರುವ ಮೂಲಕ ಮತ್ತು ಕೈಗಳ ಸ್ವಚ್ಚತೆ, ಮುಖಗವಸು ಧರಿಸುವುದು ಮತ್ತಿತರ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಈ ಕ್ರಮಗಳಲ್ಲಿ ಕೆಲವನ್ನು ಇನ್ನೂ ಕೂಡ ಮುಂದುವರೆಸಿಕೊಂಡು ಬರಲಾಗುತ್ತಿದೆ. ಕೈಗಳ ಸ್ವಚ್ಚತೆ, ದೈಹಿಕ ಅಂತರ ಕಾಪಾಡುವಿಕೆ, ಮುಖಗವಸು ಧರಿಸುವಿಕೆಯಲ್ಲಿ ಜನರಲ್ಲಿ ಮಾಹಿತಿ ಹರಡುವಿಕೆಯಲ್ಲಿ ಆಕಾಶವಾಣಿ ಮತ್ತು ದೂರಧರ್ಶನ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನಾರ್ಹವಾಗಿದೆ. ಇವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಎರಡನೇ ಹಂತದ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸರ್ಕಾರ ಅನೇಕ ಮುನ್ನೆಚ್ಚರಿಕೆಗಳನ್ನು ಜಾರಿಗೆ ತರುತ್ತಿದ್ದರೂ ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಸೂಚನೆಗಳನ್ನು ಪಾಲಿಸುವಲ್ಲಿ ನಮ್ಮ ಜನರೇ ಹೆಚ್ಚ ಜವಾಬ್ದಾರರಾಗಬೇಕಾಗುತ್ತದೆ. ಮತ್ತು ಇದು ಅನಿವಾರ್ಯ ಕೂಡ ಹೌದು.
ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ಇದೇ ವರ್ಷದ ಜನವರಿ 16ರಿಂದ ಭಾರತದಲ್ಲಿ ಆರಂಭಿಸಲಾಗಿದೆ. ಎಲ್ಲರೂ ಅದರಲ್ಲೂ ಮುಖ್ಯವಾಗಿ 45ವರ್ಷದ ನಂತರದ ವಯೋಮಾನದವರು ಮತ್ತು ಮೊದಲ ಸಾಲಿನ ಕೊರೊನಾ ವಾರಿಯರ್ ಗಳು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕಾಗಿದೆ. ಈಗಾಗಲೇ ಇವರೆಲ್ಲಾ ಲಸಿಕೆ ಹಾಕಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ತ್ವರಿತವಾಗಿ ಅಂಚೆ ಇಲಾಖೆ ಮತ್ತು ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕಾಗಿದೆ. ಈ ಕುರಿತು ನಮ್ಮ ಮಾಧ್ಯಮಗಳು ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೊರೊನಾ ವೈರಸ್ ಭಾರತಕ್ಕೆ ತೀವ್ರ ಹೊಡೆತ ನೀಡಿದೆ. 2019ರಲ್ಲಿ ಬ್ರಿಟನ್ ನನ್ನು ಹಿಂದಿಕ್ಕಿದ್ದ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಆದರೆ ಕೋವಿಡ್-19ರ ಕಾರಣದಿಂದಾಗಿ ಭಾರತದ ಆರ್ಥಿಕತೆಗೆ ಹಿನ್ನೆಡೆಯಾಗಿದ್ದು ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ. ಆದರೆ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ ವರದಿಯ ಪ್ರಕಾರ, 2025ರ ವೇಳೆಗೆ ಭಾರತ ಮತ್ತೆ ಐದನೇ ಸ್ಥಾನಕ್ಕೇರಲಿದೆ ಎಂಬ ನಿರೀಕ್ಷೆ ಇದೆ. ತ್ವರಿತ ಪ್ರಗತಿ ಸಾಧಿಸಿರುವ ಭಾರತ 2030ರ ವೇಳೆಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ.
ಶತಮಾನದ ಮಹಾಮಾರಿಯಿಂದ ಕಾಣಿಸಿಕೊಂಡ ಬಿಕ್ಕಟ್ಟಿಗೆ ಭಾರತ ರೂಪಿಸಿದ ಪ್ರಬುದ್ದ ನೀತಿ ಮತ್ತು ಸ್ಪಂದನೆಯು ಉಳಿದ ಪ್ರಜಾಪ್ರಭುತ್ವ ಮತ್ತು ಮುಂದುವರೆಯುತ್ತಿರುವ ಮತ್ತು ಹಿಂದುಳಿದ ದೇಶಗಳಿಗೆ ಸದ್ಯದ ಲಾಭವನ್ನು ನೋಡದೆ, ದೀರ್ಘಕಾಲೀನ ಲಾಭಗಳ ಮೇಲೆ ಕೇಂದ್ರೀಕರಿಸುವ ಪಾಠಗಳನ್ನು ಕಲಿಸಿದೆ. ಆದರೆ ಎರಡನೇ ಹಲೆ ತೀವೃಗತಿಯಲ್ಲಿ ಏರುತ್ತಿರುವ ಪ್ರಸ್ಥುತ ಸಂದರ್ಭದಲ್ಲಿ ಮತ್ತೆ ನಿಯಂತ್ರಣ ಕ್ರಮಗಳನ್ನು ತರಬೇಕಾಗಿರುವುದು ಅನಿವಾರ್ಯವಾಗಿದೆ. ಏಕೆಂದರೆ ಜೀವ ಮತ್ತು ಜೀವನ, ಆರ್ಥಿಕತೆಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ.
👇👇👇👇👇
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346
*****