ಅನುದಿನ ಕವನ-೧೦೩, ಕವಿ:ವನಪ್ರಿಯ(ಯಲ್ಲಪ್ಪ ಹಂದ್ರಾಳ್), ಕವನದ ಶೀರ್ಷಿಕೆ: ಯುಗಾದಿ

ಯುಗಾದಿ
ಅರವತ್ತು ದಳದ ಹೂವೊಂದು
ಥಳಥಳವಾಗಿ ಅರಳರಳಿ
ಹೊಸಹೊಸತಾಗಿ ಮರಮರಳಿ
ನವನವೀನ ಹೊಳವು ತರುತಿದೆ
ನವಯುಗಾದಿಯ ನಮಗೆ ಇಡುತಿದೆ

ಒಂದರ ಹಿಂದೊಂದು ಸಾಲಾಗಿ
ಪುಟಿದು ಬರಿತಿವೆ ತಾವಾಗಿ
ತಿವಿದು, ತಿದ್ದಿ ನಮ್ಮನೇ ನೊಣೆದು
ಹೋಗುತಿವೆ ತಣಿದು ಸಾವಾಗಿ
ಹೋಗುತಿವೆ ಧಣಿದು ತಾವಾಗಿ

ಒಂದಕ್ಕೊಂದು ಆದಿಯಾಗಿ
ಒಂದಕ್ಕೊಂದು ಅಂತ್ಯವಾಗಿ
ಪಂತಿಯ ಗೀತೆ ಹಾಡುತಿವೆ
ಸಂತೆಯ ನೆವದಿ ನಲಿಯುತಿದೆ
ಮಂದಿಯ ತಡವಿ ಮಿಡಿಯುತಿದೆ

ಮರಗಳು ಮೈ ನೆರೆತವು, ಬಲಿತವು
ಸಸಿಬಳ್ಳಿಗಳು ತುಸು ಚಿಗಿತವು, ಜಿಗಿದವು
ಹಸಿ ಹಸಿ ಇಲ್ಲದ ಹೊಸತರ ದನ್ನವ
ಕಸುವಿಲೆ ಪಡೆದವು ನಸು ನಗು ತಳೆದವು
ಕಸುವಿನ ಹೊಸಹೊಸ ಗೀತೆಯ ನುಡಿದವು

ಗರಬಡಿದಂತಿದ್ದ ಗಿಡಮರಗಳೆಲ್ಲಾ
ಸಡಗರದಿ ಹಸಿರುಟ್ಟವು, ಹೊಳೆದವು
ತರತರ ಹೂ ಧರಿಸಿಟ್ಟವು,ಮೆರೆದವು
ಆದಿಗೊಂದು ಸಂಭ್ರಮವ ತರಲು
ಯುಗಾದಿಗೊಂದು ಸಂತೋಷವ ತರಲು

ಮಳೆ ಹನಿತಿಲ್ಲ ನೀರ ರುಜುವಿಲ್ಲ
ಗಗನದಿ ಬಿಸಿಲಿನ ತಪವು ಇಳಿದಲ್ಲ
ಎಲ್ಲಿಂದ ಪಡೆದವೋ ಈ ಚೆಲುವ
ಯುಗಾದಿಗಾಗಿಯೇ ಈ ವಲವಾ
ಯುಗಾದಿಗಾಗಿಯೇ ಈ ಛಲವ

ಬೇವುಬೆಲ್ಲವೂ ಕಲೆತು-ಕೂಡಿದವು
ಸಹಿಕಹಿಯ ಮರೆತು-ಒಲಿದವು
ನೋವುನಲಿವಿಗೆ ಹೋಲಿಕೆಯಾದವು
ಸ್ಥಿತಪ್ರಜ್ಞೆಯ ಸಾರ ಸಾರಿದವು
ಸ್ಥಿತ ಪ್ಪಜ್ಞೆವ ಸಾರ ಸಾರಿದವು

-ವನಪ್ರಿಯ(ಯಲ್ಲಪ್ಪ ಹಂದ್ರಾಳ) ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಹಿರೇರಾಯಕುಂಪಿ
*****