ಅನುದಿನ ಕವನ-೧೦೪ ಕವಿ:ಮಹಾದೇವ ರಾಯಚೂರು, ಕವನದ ಶೀರ್ಷಿಕೆ:ಅಂಬೇಡ್ಕರ್ ಅಮರ

ಅಂಬೇಡ್ಕರ್ ಅಮರ
*****
ಅವಮಾನ ಮೆಟ್ಟಿ ನಿಂತ ವೀರನು
ಬಡತನವನೇ ಲೆಕ್ಕಿಸದ ಶೂರನು
ಕಷ್ಟಗಳೆದುರು ಈಜಿದ ಯೋಧನು
ಜಗವೇ ಮೆಚ್ಚಿದ ಸುಪುತ್ರನು .

ಮೂಕನಾಯಕ ಪತ್ರಿಕೆಯ ಆರಂಭಿಸಿ
ಶೋಷಿತ ವರ್ಗದ ಧ್ವನಿಯಾದನು
ಬಹಿಷ್ಕೃತ ಪತ್ರಿಕೆಯನು ಪ್ರಾರಂಭಿಸಿ
ದಮನಿತರ ಭವಿತವ್ಯ ರೂಪಿಸಿದನು .

ಪ್ರಬುದ್ಧ ಭಾರತ ಪತ್ರಿಕೆ ಆರಂಭಿಸಿದನು
ಭವ್ಯ ಭಾರತದ ಕನಸು ಬಿತ್ತಿ ನಡೆದನು
ಮೇಲು-ಕೀಳು ಸಮಾಜಕೆ ಕಂಟಕವೆಂದನು
ಕಿತ್ತೆಸೆಯಲು ಹೋರಾಟವನು ಮಾಡಿದನು .

ಕುಡಿಯುವ ನೀರಿಗೆ ಹೋರಾಟವು ಗೈದನು
ದೇವಸ್ಥಾನ ಪ್ರವೇಶಿಸಿ ನಾವೆಲ್ಲೊಂದೆಂದನು
ಸಾಮಾಜಿಕ ಕ್ರಾಂತಿಗೆ ನಾಂದಿಯ ಹಾಡಿದನು
ಸರ್ವರು ಸರಿಸಮಾನರೆಯೆಂದು ನುಡಿದನು .

ಸಂವಿಧಾನ ಅಂಬೇಡ್ಕರರ ಶ್ರಮದ ಫಲ
ಅದರಡಿ ಸಾಗಲು, ಅವರಾಶಯ ಸಫಲ
ಪ್ರಗತಿಪರ ವಿಚಾರಧಾರೆಯ ಹರಿಕಾರ
ಭಾರತಾಂಬೆ ಕಂಡ ಸರ್ವಶ್ರೇಷ್ಠ ಕುವರ .

ದೇಶೋದ್ಧಾರ ಮಾಡಿದ ಧೀಮಂತನು
ಇಡೀ ವಿಶ್ವವೇ ಮೆಚ್ಚಿದ ಗುಣವಂತನು
ಸ್ವಾಭಿಮಾನ ಮೆರೆದ ಧೈರ್ಯವಂತನು
ಭುವಿಯಲಿ ಸಾವಿರದ ಪುಣ್ಯವಂತನು.

ಭಾರತ ದೇಶದಲಿ ಹುಟ್ಟಿದ ಅಂಬೇಡ್ಕರ
ಭವ್ಯ ಭಾರತ ಕನಸು ಕಂಡ ಕನಸುಗಾರ
ಭಾರತರತ್ನ ಹೊತ್ತಿಗೆ ಪ್ರಿಯ ಅಂಬೇಡ್ಕರ
ವಸುಧೆಯೊಳು ಎಂದಿಗೂ ನೀ ಅಮರ.

✍  ಮಹಾದೇವ ರಾಯಚೂರು
*****