ಮಾಸ್ಕ್ ಧರಿಸದವರ ಚಳಿ ಬಿಡಿಸಿದ ಪೊಲೀಸ್ ಪಡೆ! ಬಳ್ಳಾರಿಯಲ್ಲಿ 50ಸಾವಿರ ದಂಡ‌ ವಸೂಲಿ

ಬಳ್ಳಾರಿ: ಕೊರೊನಾ ಸೊಂಕು ಕುರಿತು ನಿರ್ಲಕ್ಷ್ಯ ಮನೋಭಾವ ತಾಳಿ ಮಾಸ್ಕ್ ಧರಿಸದೇ ಬಳ್ಳಾರಿ ನಗರದಲ್ಲಿ ಅಡ್ಡಾಡುತ್ತಿದ್ದ ನಾಗರಿಕರಿಗೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ನೇತೃತ್ವದ ತಂಡ ಸೋಮವಾರ ಸಂಜೆ ಮೈ ಚಳಿ ಬಿಡಿಸಿತು.
ಮಾಸ್ಕ್ ಧರಿಸದವರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸ್ ಪಡೆ ನಗರದಲ್ಲಿಯೇ ಸಂಜೆ ಎರಡು ಗಂಟೆಗಳಲ್ಲಿಯೇ 50 ಸಾವಿರ ರೂ. ದಂಡ ವಸೂಲಿ ಮಾಡಿತು.
ಈ ಮೂಲಕ ನಗರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಈ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಮೂರನೇ ದಿನವೂ ಮುಂದುವರಿದಂತಾಗಿದೆ.
ಎಎಸ್ಪಿ ಬಿ.ಎನ್.ಲಾವಣ್ಯ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ನಗರದ ಎಸ್ಪಿ ವೃತ್ತ, ಇನ್ ಫೆಂಟ್ರಿ ರಸ್ತೆ,ದುರ್ಗಮ್ಮ ದೇವಸ್ಥಾನ, ಕಪಗಲ್ ರಸ್ತೆ, ಕೌಲ್ ಬಜಾರ್ ಸೇರಿದಂತೆ ವಿವಿಧೆಡೆ ಸಂಚರಿಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿತು.
ಮಾಸ್ಕ್ ಧರಿಸದೇ ತೆರಳುತ್ತಿದ್ದ ಅನೇಕ ನಿರ್ಗತಿಕರಿಗೆ ಮಾಸ್ಕ್ ಗಳನ್ನು ಕೂಡ ಅಪರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ವಿತರಿಸಿ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು. ಕೆಲ ಹೆಣ್ಮಕ್ಕಳಿಗೆ ಸ್ವತಃ ಅವರೇ ಮಾಸ್ಕ್ ಹಾಕಿದ್ದು ವಿಶೇಷವಾಗಿತ್ತು.
ಮಾಸ್ಕ್ ಹಾಕಿಕೊಳ್ಳದೇ ಉದಾಸೀನತೆಯಿಂದ ವರ್ತಿಸಿದ ಅನೇಕರಿಗೆ ಪೊಲೀಸ್ ಭಾಷೆಯಲ್ಲಿಯೇ ಬಿಸಿಮುಟ್ಟಿಸಿದ ಪೊಲೀಸ್ ಅಧಿಕಾರಿಗಳು ದಂಡ ವಿಧಿಸುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಸಿದರು.
ನಗರದ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಎಎಸ್ಪಿ ಲಾವಣ್ಯ ಅವರು ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು;ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಮಳಿಗೆಗಳಿಗೆ ಬಂದಿದ್ದ ಗ್ರಾಹಕರಿಗೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸ್ ತಪ್ಪದೇ ಪಾಲಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಡಿವೈಎಸ್ಪಿ ರಮೇಶಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
*****