ಗಜಲ್(ನಿನ್ನ ಮಡಿಲಲ್ಲಿ)
–
ನೆಮ್ಮದಿಯಾಗಿ ಮಲಗಬೇಕಿದೆ ನಿನ್ನ ಮಡಿಲಲ್ಲಿ
ಜಗವನೆಲ್ಲ ಮರೆಯಬೇಕಿದೆ ನಿನ್ನ ಮಡಿಲಲ್ಲಿ
–
ನುಂಗಿನೊಣೆವ ದುಷ್ಟತೆಯ ಹೆಬ್ಬಾವುಗಳ ನಡುವೆ
ಕೊಂಚವೂ ಸಿಗದಂತೆ ಅಡಗಬೇಕಿದೆ ನಿನ್ನ ಮಡಿಲಲ್ಲಿ
–
ಎಷ್ಟೋ ದೂರ ನಡೆನಡೆದು ಕಾಲುಗಳು ದಣಿದಿವೆ
ಮೈ ಮರೆಯುವಂತೆ ಒರಗಬೇಕಿದೆ ನಿನ್ನ ಮಡಿಲಲ್ಲಿ
–
ಪಡುವಣದಿ ಹೊಯ್ದಾಡುತಿದೆ ಸಂಜೆಯ ದೀಪ
ಮರೆಯಲಾಗದ ಕನಸಾಗಬೇಕಿದೆ ನಿನ್ನ ಮಡಿಲಲ್ಲಿ
–
ಸಿದ್ಧನ ಒಲವು ಭೂ ವ್ಯೋಮವನೂ ಮೀರಿದ್ದು
ಬೆಂಬಿಡದ ಮಗುವಿನಂತಾಗಬೇಕಿದೆ ನಿನ್ನ ಮಡಿಲಲ್ಲಿ
–
-ಸಿದ್ಧರಾಮ ಕೂಡ್ಲಿಗಿ
*****