ಅನುದಿನ ಕವನ-೧೧೦, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ-ಬಯಲ ಬೆಳಕು

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಮನದ ತಲ್ಲಣಗಳ ಕಥೆ-ವ್ಯಥೆ. ಲೋಕದ ನಿತ್ಯ ಸತ್ಯಗಳ ರಿಂಗಣಗಳ ಭಾವಗೀತೆ. ಏಕೋ ಗೊತ್ತಿಲ್ಲ ಬರೆದ ಕೂಡಲೇ ತುಂಬಾ ಇಷ್ಟವಾದ ಕವಿತೆ. ಪೂರ್ಣ ಓದಿ ನೋಡಿ. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಸುಖ ಸಂಪತ್ತು ಬಂದಾಗ ನಾಲ್ಕಾರು ಜನರೊಂದಿಗೆ ಹಂಚಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಕಷ್ಟ ಆಪತ್ತು ಬಂದಾಗ ನಮಗಿಂತ ಕಷ್ಟದಲ್ಲಿದ್ದವರನ್ನು ನೋಡಿ, ಕುಗ್ಗಿದ ಮನಸನ್ನು ಸದೃಢಗೊಳಿಸಿ, ಧೈರ್ಯ ಸ್ಥೈರ್ಯಗಳಿಂದ ಎದುರಿಸಿ, ಬದುಕನ್ನು ಸಾಫಲ್ಯಗೊಳಿಸಿಕೊಳ್ಳಬೇಕು. ಏನಂತೀರಾ.,?”  – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇

ಬಯಲ ಬೆಳಕು.!

ಆಲಯದಿಂದಾಚೆಗೆ ಬಂದು
ನೋಡಬೇಕು ಬಯಲೊಳಗೆ
ನಾಲ್ಕುಗೋಡೆಗಳ ತೊರೆದು
ನಿಲ್ಲಬೇಕು ಸಂತೆಯೊಳಗೆ.!

ಬರೀ ನಮ್ಮ ಮನದೊಳಗಣ
ನುಡಿಗೆ ದನಿಯಾಗುವುದಕಿಂತ
ಕಿವಿಯಾಗಬೇಕು ಹೊರಗಣ
ಜನಮಾನಸದ ಮಾತುಗಳಿಗೆ.!

ಸಣ್ಣ ಸಣ್ಣ ನೋವು ಸಂಕಟಕೆ
ತಲೆಗೆ ಕೈಕೊಟ್ಟು ಕೂರುವುದಕಿಂತ
ಕಣ್ತೆರೆಯಬೇಕು ಕರುಣೆಯಿಂದ
ಜಗದ ದುಃಖ ದುಮ್ಮಾನಗಳಿಗೆ.!

ಚಿಕ್ಕದೊಂದು ಚಿಂತೆ ಚಡಪಡಿಕೆಗೆ
ಕನಲಿ ಕುಸಿದು ಹೋಗುತ್ತೇವೆ
ಕೋಟಿ ಕೋಟಿ ಕಷ್ಟ ಕೋಟಲೆ
ನಿತ್ಯ ತಾಂಡವವಾಡುತಿದೆ ಹೊರಗೆ.!

ಹೆದರಿ ಹೌಹಾರಿ ಹನಿ ಕಣ್ಣೀರಿಗೆ
ಭರವಸೆಯೇ ಕಳೆದುಕೊಳ್ಳುತ್ತೇವೆ
ಆಚೆ ಅದೆಷ್ಟೋ ಜೀವಗಳು ಅಂಜದೆ
ಈಜಿವೆ ಕಂಬನಿ ಹೊಳೆಯೊಳಗೆ.!

ಪಾದರಕ್ಷೆ ಇಲ್ಲವೆಂದು ನಡೆಯದೆ
ಮನೆಯಲ್ಲುಳಿದು ಕೊರಗುತ್ತೇವೆ.!
ಪಾದಗಳೇ ಇಲ್ಲದಿದ್ದರು ಮರುಗದೆ
ತೆವಳಿ ಸಾಗುತಿಹರು ಬೀದಿಯೊಳಗೆ.!

ಒಳಗೇ ಕುಳಿತು ಕತ್ತಲೆಗೆ ಹಳಿದು
ವೃಥಾ ನೋಯುವುದರಲಿಲ್ಲ ಬದುಕು.!
ಸ್ವಾನುಕಂಪದ ಪಟ್ಟಿ ಕಳಚಿ ಆಚೆಬಂದು
ದಿಟ್ಟಿಸುವುದರಲ್ಲಿದೆ ಬದುಕ ಬೆಳಕು.!

ಎ.ಎನ್.ರಮೇಶ್. ಗುಬ್ಬಿ.