ಹೊಸಪೇಟೆ(ವಿಜಯನಗರ): ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮ್ಯಾನುವಲ್ ಸ್ಕ್ಯಾವೆಂಜರ್ಸ್ ನಿಷೇಧ ಕುರಿತ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಬೀದಿ ನಾಟಕವು ಸೋಮವಾರ ಹೊಸಪೇಟೆ ನಗರಸಭೆಯ ಆವರಣದಲ್ಲಿ ಪ್ರದರ್ಶನಗೊಂಡಿತು.
ಮ್ಯಾನುವಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013 ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಮಾನತೆ ಟ್ರಸ್ಟ್ ಕಲಾವಿದರು ಪ್ರದರ್ಶಿಸಿದ ಬೀದಿನಾಟಕ ಗಮನ ಸೆಳೆಯಿತು.
ಸಫಾಯಿ ಕರ್ಮಚಾರಿಗಳು ಒಳಚರಂಡಿ ಪಿಟ್‍ಗಳಲ್ಲಿ ಇಳಿದು ತ್ಯಾಜ್ಯ ಎತ್ತುವುದರಿಂದ ಆಗುವ ಪ್ರಾಣಾಪಾಯ ಕುರಿತ ರೂಪಕವನ್ನು ಪ್ರದರ್ಶಿಸಲಾಯಿತು.
ಪ್ರದರ್ಶನದ ನಂತರ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರು ಮಾತನಾಡಿ, ಮಾನವರು ಪಿಟ್ ಒಳಗೆ ಇಳಿದು ಸ್ವಚ್ಚಗೊಳಿಸುವುದು ಅಮಾನುಷ ಪದ್ಧತಿಯಾಗಿದೆ. ಸಫಾಯಿ ಕರ್ಮಚಾರಿಗಳಿಗೆ ಪ್ರಾಣಾಪಾಯ ಉಂಟಾಗುವ ಉದ್ದೇಶದಿಂದಲೇ ಮ್ಯಾನುವಲ್ ಸ್ಕ್ಯಾವೆಂಜರ್ಸ್ ನೇಮಕಾತಿಯನ್ನು ನಿಷೇಧಿಸಿದೆ ಎಂದು ಹೇಳಿದರು.
ನಗರವನ್ನು ಸ್ವಚ್ಚಗೊಳಿಸುವ ಎಲ್ಲಾ ಪೌರಕಾರ್ಮಿಕರು ಸಫಾಯಿ ಕರ್ಮಚಾರಿಗಳೇ ಆಗಿದ್ದಾರೆ. ಇವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 2013-14ರಲ್ಲಿ ಸಮೀಕ್ಷೆ ಮಾಡಿದಾಗ ಶಿಕ್ಷೆಗೆ ಒಳಪಡುವ ಭಯದಿಂದ ಯಾರು ಮಾಹಿತಿ ನೀಡಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಮತ್ತೊಮ್ಮೆ ಸಮೀಕ್ಷೆ ಆರಂಭವಾಗಿದೆ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಮ್ಯಾನುವಲ್ ಸ್ಕ್ಯಾವೆಂಜರ್ ಹೇಗೆ ತೊಂದರೆಗೆ ಒಳಪಡುತ್ತಾರೆ ಎಂಬುದನ್ನು ನಾಟಕ ಮೂಲಕ ನೈಜವಾಗಿ ಕಲಾವಿದರು ಕಟ್ಟಿಕೊಟ್ಟಿದ್ದಾರೆ ಎಂದರು.
ಮ್ಯಾನುವಲ್ ಸ್ಕ್ಯಾವೆಂಜರ್‍ಗಳನ್ನು ಸ್ವಚ್ಚತೆಗಾಗಿ ಬಳಸಿಕೊಳ್ಳುವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಫಾಯಿ ಕರ್ಮಚಾರಿಗಳು ನಗರಸಭೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಪುನರ್ವಸತಿ ಪಡೆದುಕೊಳ್ಳಬೇಕು. ಕೇವಲ ನಗರಸಭೆ ಆವರಣ ಮಾತ್ರವಲ್ಲದೇ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಜಾಗೃತಿ ಬೀದಿ ನಾಟಕ ನಡೆದರೆ ಎಲ್ಲಾ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡುತ್ತದೆ ಎಂದು ಅವರು ತಿಳಿಸಿದರು.
ವಸತಿ ಸೌಲಭ್ಯ ಹೊಂದದ ಸಫಾಯಿ ಕರ್ಮಚಾರಿಗಳು ಸ್ವತಃ ಮುಂದೆ ಬಂದು ನಿವೇಶನ ರಹಿತ ಧೃಡೀಕರಣ ಜೊತೆ ಅರ್ಜಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರಸಭೆಗೆ ಒದಗಿಸಿದರೆ ಖಂಡಿತವಾಗಿ ವಸತಿ ಯೋಜನೆಯನ್ನು ಕಲ್ಪಿಸಿಕೊಡಲಾಗುತ್ತದೆ. ಖುದ್ದಾಗಿ ಮನೆ ಕಟ್ಟಿಸಿಕೊಳ್ಳುವವರಿಗೆ 7.5 ಲಕ್ಷ ಪ್ರೋತ್ಸಾಹಧನವನ್ನು ನಗರಸಭೆ ವತಿಯಿಂದ ಕೊಡಲಾಗುತ್ತದೆ. ನಿವೃತ್ತಿ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಅವಕಾಶವಿಲ್ಲ. ಆದರೆ ಸಚಿವರೊಂದಿಗೆ ಚರ್ಚಿಸಿ ಈ ಕುರಿತಂತೆ ಪರಿಶೀಲನೆ ನಡೆಸಿ ವಸತಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಪರಿಸರ ಎಂಜಿನಿಯರ್ ಆರತಿ, ಎಇಇ ಮನ್ಸೂರ್, ಸಮಾನತೆ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಎನ್.ಹುಲಿಗೆಮ್ಮ ಸೇರಿದಂತೆ ಇತರರು ಇದ್ದರು.
*