ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶರಣಪ್ಪ ಮೆಟ್ರಿ ಅವರು ಆರಂಭದಲ್ಲಿ ಚೆನ್ನ ಶರಣ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದರು.
ಪ್ರಸ್ತುತ ಗಂಗಾವತಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಸಾಹಿತ್ಯ ಚಟುವಟಿಕೆಯಲ್ಲಿ ಸಂತಸ ಕಾಣುತ್ತಿರುವ ಶರಣಪ್ಪ ಮೆಟ್ರಿ ಅವರ ‘ಮುಗ್ಧ ಕಂದನ ನಗೆ’ ಕವಿತೆ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.👇
*****
ಮುಗ್ಧ ಕಂದನ ನಗೆ
ಮುಗ್ಧ ಕಂದ ಏನು ಚಂದ
ನಿನ್ನ ನಗೆಯು ?
ನಗಿಸಿ ನಗುತಲಿರುವ ನಿನ್ನ-
ದೆಂಥ ಬಗೆಯು ?
ನಿನ್ನ ನಗುವಿನಲ್ಲಿ ಇಲ್ಲ
ಯಾವ ಹೊಗೆಯು .
ನಗುವ ಚಂದ್ರನಲ್ಲಿ ಉಂಟು
ಕಪ್ಪುಕಲೆಯು ;
ನಕ್ಕು ನಗಿಸುತಿರುವ ನಿನ್ನ
ನಗೆಯ ಸೆಲೆಯು ;
ನಿನ್ನ ನಗುವಿನಲ್ಲಿ ಇಲ್ಲ
ಯಾವ ಬಲೆಯು .
ನಗುತಲಿರುವ ಜ್ಯೋತಿಗುಂಟು
ಕಪ್ಪುಮಸಿಯು ;
ಎಲ್ಲರನ್ನು ನಗಿಸಿ ನಗುವ
ಎಂಥ ಖುಷಿಯು ? ?
ನಿನ್ನ ನಗುವಿನಲ್ಲಿ ಇಲ್ಲ
ಯಾವ ಬಿಸಿಯು .
ನಾನು ಮಾರುಹೋದೆನಲ್ಲ
ನಗೆಯ ಪರಿಗೆ ;
ಕಪಟವಿರದ ದೋಷವಿರದ
ನಗೆಯ ಬಗೆಗೆ ;
ಮಂತ್ರಮುಗ್ಧನಾದೆ ನಾನು
ನಿನ್ನ ನಗೆಗೆ !
-ಎನ್.ಶರಣಪ್ಪ ಮೆಟ್ರಿ, ಗಂಗಾವತಿ
*****