ನನ್ನೆದೆಯ ನೋವು
*****
ಬಿತ್ತರವಾಗದೆ ತತ್ತರಗೊಂಡಿದೆ
ಸುತ್ತಲ ಸಂಗತಿ ಹಲವು|
ಮೆತ್ತನೆ ಮಾತಲಿ ಜೀತವ ಗೈಯುತ
ಸತ್ತಂತಿರುವುದು ನೋವು||
ಕುತ್ತಿಗೆ ಹಿಸುಕಲು ಚಿಂತಿಪ ಲೋಗರ
ಬೆತ್ತಲೆ ಮಾಡುವ ಬಯಕೆ|
ನತ್ತಿನ ಸುತ್ತಲು ನರ್ತಿಸಿದಾತಗೆ
ಸುತ್ತಿಗೆ ಪೆಟ್ಟದು ಬೇಕೆ||
ಸತ್ತರೆ ಸಾಯಲಿ ಸೌಮ್ಯರ ವರ್ಗವು
ನೆತ್ತರು ಸಿಕ್ಕರೆ ಸಾಕು|
ಮೆತ್ತಗೆ ನುಡಿವರ ಶಸ್ತ್ರವ ಮಾಡುತ
ಕತ್ತನು ಮುರಿಯಲೆ ಬೇಕು||
ಬೆಕ್ಕಸ ಬೆರಗಲಿ ಕಾಣುವ ಕಣ್ಣಿಗೆ
ಸಿಕ್ಕದು ಸತ್ಯದ ಮಾತು|
ರೊಕ್ಕವನೆಸೆದರೆ ಬಾಲವ ಬಗ್ಗಿಸಿ
ನೆಕ್ಕುವ ನಾಯಕ ಧಾತು||
ಲೋಕದ ಬೆನ್ನಿಗೆ ಬವಣೆಯು ಸಂದಿದೆ
ಸೋಕಿನ ರೂಪದಿ ನೋಡಿ|
ನೂಕುವ ಶಕ್ತಿಯ ಕಾಣದೆ ನೋಯುತ
ಸಾಕಲೆ ಬೇಕಿದೆ ಬೇಡಿ||
ನೋವುಗಲೆಲ್ಲವು ಮಾನವ ಹೃದಯದ
ಬಾವುಗಳಾಗಿದೆಯಿಲ್ಲಿ|
ಭಾವನೆ ಬಾರದೆ ಗಂಟಲು ತಗ್ಗಿದೆ
ಸಾವಿನ ಸಂಭ್ರಮದಲ್ಲಿ||
-ಶಿವೈ.
(ವೈಲೇಶ್ ಪಿ ಎಸ್ ಕೊಡಗು)
*****