ಮಳೆ
ಮಳೆಯ ಬಗ್ಗೆ ನೆನಪುಗಳು ಅನೇಕ
ಕಾಡುವುದು ನಮ್ಮಮ್ಮ ದೊಡ್ಡಮ್ಮನ ಜೊತೆ
ಮೈಲು ದೂರದ ಬಾವಿಯಲ್ಲಿ ನೀರು ಸೇದಿ
ಬಟ್ಟೆ ಒಗೆದು, ನೀರಿನ ಬಿಂದಿಗೆಯ ಮೇಲೆ
ಬಟ್ಟೆಯ ಬುಟ್ಟಿಯನ್ನಿಟ್ಟು
ಹೊತ್ತು ಹರದಾರಿ ತರುತ್ತಿದ್ದದ್ದು …
ಅದೊಮ್ಮೆ… ಇಳಿಹಗಲು ಆಜೂಬಾಜು
ಕಾಲು ಬಿಟ್ಟಿಳಿದ ಜೋರಾದ ಮಳೆ
ಗುಡುಗು ಬಳ್ಳಿ ಮಿಂಚು ಮಳೆಯ ರಭಸಕ್ಕೆ
ಮರಗಿಡ ತಟ್ಟಾಡಿ ಹೆದರಿ ಕೈಕಾಲುಡುಗಿ
ಬಯಲಿಗೆ ಬಡಿವ ಸಿಡಿಲು ನೆನಪಾಗಿ
ಮನೆಯ ಮೂಲೆಯಲ್ಲಿ ಕೂತು ಬೇಡಿದ್ದು
ಓ ದೇವರೇ ನನ್ನಮ್ಮ ದೊಡ್ಡಮ್ಮ ಸುಖವಾಗಿ
ಮನೆ ಸೇರುವಂತೆ ಮಾಡು
ಮಳೆ ನಿಲ್ಲಲಿಲ್ಲ, ನಡುಹಾದಿ
ಮತ್ತೆಲ್ಲೂ ನಿಲ್ಲುವಂತಿರಲಿಲ್ಲ
ಮಳೆಯಲ್ಲಿ ನೆನೆಯುತ್ತಾ
ಬಂದ ಅಮ್ಮ ದೊಡ್ಡಮ್ಮಂದಿರು
ಮನೆಯಲ್ಲಿ ಬಟ್ಟೆ ನೀರುಗಳ ಹೊರೆ ಇಳಿಸಿ
ಅದೇ ಬಟ್ಟೆಯ ಅಂಚು ಹಿಂಡಿ ಹಿಂಡಿ
ನೀರು ಬಸಿದು ಹೇಗೋ ಒಣಗಿಸಿಕೊಂಡು
ಹೆಣಗಾಡುತ್ತಾ ಇರುವಾಗ ದೇವರೇ
ಜಗತ್ತಿನ ಎಲ್ಲ ಹೆಣ್ಣುಮಕ್ಕಳಿಗೂ ಕನಿಷ್ಠ
ಎರಡು ಜೊತೆ ಬಟ್ಟೆ ಕೊಡು
ಮಳೆನೀರಿನ ಕುಂಟೆಗಳಲ್ಲಿ ಕಪ್ಪೆ ಹಾಡುತ್ತಿವೆ.
ಹೊರಗೆ ತಣ್ಣಗೆ ತಂಗಾಳಿ ಬೀಸುವಾಗ
ರೋಹಿಣಿ ಮಳೆಯ ರಭಸದ ಗಾಳಿಯ ನೆನಪಾಗುವುದು
ಅದರ ಹಿಂದೆಯೇ ಮಾಡಿನ ಹಂಚಿನ ಸಂದುಗಳಲ್ಲಿ
ಫಳ್ಳನೆ ಹೊಳೆದ ಮಿಂಚು, ದಡಗುಡಿಸಿದ ಗುಡುಗು
ಬಳಿಕ ಶುರುವಾದ ತಟಪಟ ಮಳೆ
ಅಲ್ಲಿ ಮನೆಯ ಮುಂದಿನ ಹುಳಿ ಮಾವಿನ ಮರ,
ಪುಟ್ಟ ಮಾವಿನ ಮರ, ಹಲಸಿನ ಮರ
ಅವುಗಳೆಡೆಯಿಂದ ಜೋರಾಗಿ ನುಗ್ಗಿ ಬರುವ
ಸಿಳ್ಳೆಯಂಥ ಗಾಳಿ. ಮಾವಿನ ಮರಗಳಿಂದ
ಉದುರುವ ಕಾಯಿಗಳ ಸದ್ದು
ಮತ್ತಾರಾದರೂ ಎತ್ತಿಕೊಂಡಾರೆಂಬ ಆತಂಕದಲ್ಲಿ
ಗುಡುಗು ಸಿಡಿಲುಗಳ ಭೀತಿ ಧಿಕ್ಕರಿಸಿ ಓಡಿ
ಮಿಂಚಿದ ಮಿಂಚಲ್ಲಿ ಬಿದ್ದ ಕಾಯಿಗಳ ಆಯುತ್ತಿದ್ದ ನೆನಪು.
ಇಂದು ರೋಹಿಣೆ ಮಳೆ ಮಳೆಸುರಿಸುವುದಿಲ್ಲ
ರೋಹಿಣಿಯ ದಿನಗಳ ಜೇಷ್ಠಾಷಾಢ ಗಾಳಿ ಮರಗಳಲ್ಲಿ
ಶಿಳ್ಳೆ ಹೊಡೆಯುವುದಿಲ್ಲ, ಅಲ್ಲಿ ಮರಗಳೇ ಇಲ್ಲ
ನನ್ನ ಬಾಲ್ಯದ ಮನೆಯೂ ಇಲ್ಲ
ಹಾಗಾದರೆ ಅಲ್ಲಿ ಏನುಳಿದಿರಬಹುದು
ನಾವು ಭೌತಿಕವಾಗಿ ಕಳೆದುಕೊಂಡು ಮನಸ್ಸಿನೊಳಗೇ
ಇಟ್ಟುಕೊಂಡ ಎಲ್ಲ ಪ್ರತಿಮೆಗಳು ನಮ್ಮ ನಂತರ ಏನಾಗುತ್ತವೆ?
ಏನಾದರೂ ಆಗಲಿ.
ಅಲ್ಲಿ ಮನೆಯೊಂದ ಕಟ್ಟುವೆನು
ಅಲ್ಲಿ ಅಲ್ಲಿದ್ದ ಎಲ್ಲ ಮರಗಳ ಸಸಿಗಳ ನೆಡುವೆನು
ಅಲ್ಲಿ ಅವಕ್ಕೆಲ್ಲ ತಕ್ಕ ನೀರು ಗೊಬ್ಬರವುಣಿಸಿ
ಅದೇ ಸದ್ದು ಅದೇ ಗಾಳಿ ಮಳೆ ಮಿಂಚು ಗುಡುಗುಗಳನ್ನೆಲ್ಲ ಮರಳಿ ತರುವೆನು
ಕನಸು ನನಸಾಗಲು ಓ ದೇವರೇ… ಬರಬೇಕು ನನ್ನೊಂದಿಗೆ
ನಾನೋ ಅಪರವಯಸ್ಕ ಜೊತೆಗೆ
ಆ ಜಾಗ ತನ್ನದೆಂದು ದಾಯಾದಿಗಳು ದಾವೆ ಹೂಡಿದ್ದಾರೆ
-ಆರ್ ವಿಜಯರಾಘವನ್, ಕೋಲಾರ