ನನ್ನೂರ ನಕ್ಷತ್ರಗಳು..! -ರಂಹೋ

ಪ್ರತಿದಿನ ಬೆಳಗು,ಬೈಗಿನಲ್ಲಿ ಅಕ್ಕಯ್ಯಾ…ರಂಗಾ…ಅಂತ ಕೂಗುತ್ತ ಬರುತ್ತಿದ್ದ ಆ ಹಿರಿಯ ಜೀವದ ತುಂಬ ಜಾನಪದ ಹಾಡುಗಳ ಮಹಾಪೂರವಿತ್ತು!ಮಾತುಗಳ ತುಂಬ ಅನುಭವಗಳ ಪ್ರಭಾವವಿತ್ತು.
ನಮಗೆ ಅಗತ್ಯವಲ್ಲದ ಆದರೆ ಅಕ್ಕಪಕ್ಕದವರು,ಊರವರು ನಮ್ಮನ್ನು ಹೀಯಾಳಿಸಬಾರದನ್ನುವ ಕಾಳಜಿಯಿಂದ ಪಡಶಾಲೆಯ ಹೊಸ್ತಿಲ ಬಳಿ ಕೂರುತ್ತಿದ್ದ ಆಕೆ ಊರಿನ ಎಷ್ಟೋ ತಾಯಂದಿರಿಗೆ ಸೂಲಗಿತ್ತಿ! ಮಕ್ಕಳ ,ಹಿರಿಯರ ಚಿಕ್ಕಪುಟ್ಟ ಕಾಯಿಲೆಗಳಿಗೆ ಮನೆ ಮದ್ದು ಹೇಳುತ್ತಿದ್ದ ವೈದ್ಯೆ! ಹೊಟ್ಟೆನೋವಿಗೆ,ಹುಳುಕು ಹಲ್ಲಿನ ನೋವಿಗೆ ನೆನಪಾಗುತ್ತಿದ್ದುದು ಅದೇ ಅಜ್ಜಿ!
ಊರಿನ ಮದುವೆಗಳಿಗೆ,ಋತುಮತಿಯಾದ ಹೆಣ್ಣು ಮಕ್ಕಳ ವಸಗೆಗಳಿಗೆ ,ಮಾರಮ್ಮನ ಜಾತ್ರೆಗೂ ಈಕೆಯೇ ಖ್ಯಾತ ಗಾಯಕಿ!
ಇಂತಿಪ್ಪ #ಹನುಮಂತಮ್ಮಜ್ಜಿ ಅವ್ವನಿಗಷ್ಟೇ ಅಲ್ಲ,ಅವ್ವನಂತಹ ಅವ್ವಂದಿರಿಗೆಲ್ಲ ಆಪ್ತಸಖಿ!
ತನ್ನ ಸಂಕಟಗಳನ್ನು ತನ್ನ ಸೋಬಾನೆ ಪದಗಳಲ್ಲಿ ತೇಲಿಬಿಡುತ್ತ,ಇತರರ ಕಷ್ಟಕ್ಕೆ ಕಣ್ಣೀರಾಗುತ್ತಿದ್ದ ಅಜ್ಜಿಗೆ ಅಪಾರ ಹಾಸ್ಯಪ್ರಜ್ಞೆ ಇತ್ತು.ಸಂದರ್ಭಗಳಿಗನುಸಾರ ತನ್ನದೇ ಭಾಷೆಯಲ್ಲಿ ಪದ ಕಟ್ಟಿ ಹಾಡುತ್ತ,ಈ ದೇಹಕ್ಕೆ ಯಾವ್ದು ಶಾಶ್ವತ,ಹಿಡಿ ವಿಶ್ವಾಸವಷ್ಟೇ ದೊಡ್ಡದು ಅನ್ನುತ್ತಿದ್ದ ಅಜ್ಜಿ ಸಿಕ್ಕಲ್ಲಿ ಸಿಕ್ಕಷ್ಟು ತಿನ್ನುವುದೋ,ಹಿಡಿ ಅಕ್ಕಿ,ರಾಗಿ ತೆಗೆದುಕೊಂಡು ಹೋಗಿ ತಾನೇ ಬೇಯಿಸಿಕೊಂಡು ತಿನ್ನುವುದೋ ಮಾಡುತ್ತಿದ್ದಾಕೆ.
ಬದುಕಿನ ಇಳಿಸಂಜೆಯಲ್ಲಿಯೂ ಯಾರಿಗೂ ಉಪದ್ರವವಾಗದ – ಹೊರೆಯಾಗದ ಅಜ್ಜಿ ತಣ್ಣಗೆ ಬದುಕಿ ಬಾಳಿದಳು.
ನನ್ನ ಕಾಲೇಜು ದಿನಗಳಿಂದಲೂ,ಟೀಚರ್ ಆದಮೇಲೂ ಪ್ರತಿದಿನ ಬೆಳಗೆ ತನ್ನ ಸೆರಗಿನ ತುದಿಯಲ್ಲಿಟ್ಟುಕೊಂಡು ಹೊಸ್ತಿಲ ಬಳಿ ಸುರಿಯುತ್ತಿದ್ದ ಕಾಕಡ,ಕನಕಾಂಬರ,ಮಲ್ಲಿಗೆ ಹೂಗಳು…ಈಗಲೂ ನನಗೆ ಕಾಡುವ ಚಿತ್ರ.
ಅಪಾರ ದುಃಖಗಳ ಜೊತೆಗೂ ಬದುಕನ್ನು ಚಂದಗೆ ಧೇನಿಸಿದ ಇಂತಹ ಬಾಳುಗಳು ನನ್ನನ್ನೂ ಎಷ್ಟೊಂದು ಪ್ರಭಾವಿಸಿವೆ..
ನನ್ನ ಅಜ್ಜಿ ಹೇಳುತ್ತಿದ್ದುದು-ಒಳ್ಳೆಯದು ಮಾಡಿದರೆ ಸತ್ತ ಮೇಲೆ ಸ್ವರ್ಗದಲ್ಲಿ “ಹೂ ಬಿಡಿಸುವ ಕೆಲಸ” ಕೊಡ್ತಾರಂತೆ “!ಅಂತ!!
ಬಹುಶಃ ನನ್ನಜ್ಜಿ,ಈ ಹನುಮಂತಮ್ಮಜ್ಜಿ ಹೂ ಬಿಡಿಸುತ್ತಾ..ಅಲ್ಲಿನ ಹೆಣ್ಣುಮಕ್ಕಳಿಗೂ ಹೂ ಕೊಡುತ್ತಿರಬಹುದಾ!!!
-ರಂಹೊ,
(ರಂಗಮ್ಮ ಹೋದೆಕಲ್)
ಕವಯತ್ರಿ, ಹೋದೆಕಲ್
ತುಮಕೂರು
*****