ಇದು ನಿಮ್ಮ ಮನದಲ್ಲೂ ಮೂಡಿರುವ ಸಾಲುಗಳ ಕವಿತೆ. ನಿನ್ನೆ-ಮೊನ್ನೆ ಜನರ ಕೊಳ್ಳುಬಾಕತನದ ಹಪಹಪಿಕೆಯನ್ನು ಕಂಡಾಗ ನಿಮ್ಮಲ್ಲೂ ಉದಿಸಿದ ಭಾವಗಳಿಗೆ ಭಾಷ್ಯವಾಗಿದ್ದೇನೆ. ಅಗತ್ಯಕ್ಕಿಂತ ಹೆಚ್ಚಾಗಿ ಖರೀದಿಸುತ್ತಿರುವ, ಅಕ್ಕ-ಪಕ್ಕದವರ ಪರಿವೆಯಿಲ್ಲದೆ ಎಲ್ಲವೂ ನಮಗೇ ಬೇಕೆನ್ನುವ, ಈ ಲಾಕ್ಡೌನು ಮುಗಿಯುವುದೇ ಇಲ್ಲವೇನೋ ಎಂಬಂತೆ ವರ್ಷಕ್ಕಾಗುವಷ್ಟು ಕೂಡಿಟ್ಟುಕೊಳ್ಳುತ್ತಿರುವವರಿಗೆ ಈ ಕವಿತೆಯ ಮೂಲಕ ವಿನಮ್ರ ವಿನಂತಿ. ನಾವೂ ಬದುಕೋಣ.. ಬೇರೆಯವರ ಬದುಕಿಗೂ ಆಸರೆಯಾಗೋಣ. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 👇
ವಿನಮ್ರ ವಿನಂತಿ.!
ಹೊರಗೆ ರಸ್ತೆಗಳ ಮೇಲೆ
ಈಗ ಬದುಕಿನ ಓಡಾಟ
ನಿಂತಿದೆಯೆಂದ ಮಾತ್ರಕ್ಕೆ
ಒಳಗೆ ಮನಗಳ ಸಂವಹನ
ಸಂವೇದನೆಗಳ ಒಡನಾಟ
ಎಂದಿಗೂ ನಿಲ್ಲದಿರಲಿ.!
ಬೀಗ ಬಿದ್ದಿರುವುದು..
ಕೇವಲ ಬದುಕಿನ ವೇಗಕ್ಕೆ
ಹೃದಯದ ಓಘಕ್ಕಲ್ಲ.!
ಎದೆಯ ತುಡಿತ ಮಿಡಿತ
ಪ್ರೀತಿ ಅಂತಃಕರಣ ಸ್ನೇಹ
ಕರುಣೆಗಳ ರಾಗಕ್ಕಲ್ಲ.!
ಈ ಗೃಹ ಬಂಧನದೊಳಗೂ
ಬತ್ತದಿರಲಿ ಬರಡಾಗದಿರಲಿ
ಆಸ್ಥೆ ಆಂತರ್ಯದ ಸ್ಪಂದನ
ದಯೆ ಔದಾರ್ಯದ ಕಂಪನ.!
ನಾವೂ ಸುರಕ್ಷಿತವಾಗೋಣ
ಇತರರಿಗೂ ನೆರವಾಗೋಣ.!
ಯಾರನ್ನೂ ಕಳೆದುಕೊಳ್ಳದೆ
ಯುದ್ದ ಗೆಲ್ಲುವುದರಲ್ಲಿದೆ
ದಿಗ್ವಿಜಯದ ಮಾಧುರ್ಯ.!
ಸಂಕಷ್ಟಗಳಲ್ಲಿ ನೆರೆಹೊರೆಗೂ
ಕೈಚಾಚಿ ನಡೆಯುವುದರಲ್ಲಿದೆ
ನಿಜಜೀವನ ಸೌಂದರ್ಯ.!
-ಎ.ಎನ್.ರಮೇಶ್. ಗುಬ್ಬಿ.
*****