ಹ ಬೊ ಹಳ್ಳಿ ವಿಧಾನ ಸಭಾ ಕ್ಷೇತ್ರದ ತೋಟಗಾರಿಕೆ ಬೆಳೆಗಾರರಿಗೆ ಪಾಸ್ ವಿತರಣೆಗೆ ಕ್ರಮ -ಶಾಸಕ‌ಎಸ್.ಭೀಮನಾಯ್ಕ

ಹಗರಿಬೊಮ್ಮನಹಳ್ಳಿ: ಲಾಕ್‌ಡೌನ್ ವೇಳೆ ತೋಟಗಾರಿಕೆ ಬೆಳೆಗಾರರಿಗೆ ತಮ್ಮ ಉತ್ಪಾದನೆಗಳ ಮಾರಾಟಕ್ಕೆ ತೊಂದರೆಯಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಮಾರಾಟಕ್ಕೆ ಅಡ್ಡಿಯಾಗದಂತೆ ಪಾಸ್ ವಿತರಿಸಲು ಕ್ರಮ‌ಕೈಗೊಳ್ಳಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.‌ಭೀಮನಾಯ್ಕ ಅವರು ತಿಳಿಸಿದರು.
ತಾಲೂಕಿನ ತಹಸೀಲ್ದಾರ್ ಮತ್ತು ತೋಟಗಾರಿಕೆ ಸಹಾಯಕ ನಿರ್ದೇಶಕರು ಬೆಳೆಗಾರರ ಪಟ್ಟಿ ಸಿದ್ಧಪಡಿಸಿದ್ದು, ಅಗತ್ಯವಿರುವವರಿಗೆ ಪಾಸ್ ನೀಡಲಾರಂಭಿಸಿದ್ದಾರೆ. ಅಲ್ಲದೆ ಖರೀದಿದಾರರಿಗೂ ಪಾಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ರೈತಸಂಘದ ಹಿರಿಯ ಮುಖಂಡ ಜೆ.ಎಂ.ವೀರಸಂಗಯ್ಯ, ಸಿದ್ದನಗೌಡ ಅವರು ಸೇರಿದಂತೆ ಹಲವು ಮುಖಂಡರ ಜತೆ ಚರ್ಚಿಸಿ, ರೈತರ ಪ್ರಮುಖ ಮಲ್ಲಿಗೆ, ಅಂಜೂರು, ಟೊಮ್ಯಾಟೊ ಸೇರಿ ನಾನಾ ಬೆಳೆಗಳ ಮಾರಾಟಕ್ಕೆ ಅಡ್ಡಿಯಾಗದಂತೆ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಮಲ್ಲಿಗೆ ಬೆಳೆಗಾರರು ಶಿವಮೊಗ್ಗ, ಕೊಟ್ಟೂರು ಸೇರಿ ಹಲವೆಡೆ ಬೈಕ್‌ಗಳಲ್ಲಿ ಬೆಳೆಯ ಚೀಲಗಳನ್ನು ಸಾಗಣೆ ಮಾಡುತ್ತಿದ್ದಾರೆ. ಲಾಕ್‌ಡೌನ್ ವೇಳೆಯ ಮುಂಜಾನೆ .೧೦ಗಂಟೆ ಬಳಿಕವೂ ಸಾಗಣೆಗೆ ಅಡ್ಡಿಯಾಗದಂತೆ ಬೆಳೆಗಾರರಿಗೆ ಪಾಸ್ ನೀಡುವಂತೆ ಸೂಚನೆ ನೀಡಲಾಗಿದೆ.
ಕಳೆದ ವರ್ಷ ಮಲ್ಲಿಗೆ ಮತ್ತು ನಾನಾ ತೋಟಗಾರಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಸರಕಾರದ ಗಮನಸೆಳೆಯಲಾಗಿತ್ತು. ಈ ಬಾರಿಯೂ ರೈತರ ಸುರಕ್ಷತೆ ಮತ್ತು ಹಿತಕಾಯಲು ಬದ್ಧವಾಗಿದ್ದೇನೆ ಎಂದು ತಿಳಿಸಿದರು.
ಅನಗತ್ಯವಾಗಿ ಪೊಲೀಸರು ರೈತರು, ತೋಟಗಾರಿಕೆ ಬೆಳೆಗಾರರಿಗೆ ಲಾಕ್‌ಡೌನ್ ನೆಪದಲ್ಲಿ ಕಿರುಕುಳ ನೀಡದಂತೆಯೂ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕರೋನಾ ಹತೋಟಿಗೂ ಕ್ರಮ: ಹ ಬೊ ಹಳ್ಳಿ ತಾಲೂಕು ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಹತೋಟಿಗೆ ಸಾರ್ವಜನಿಕರ ಸಹಕಾರ ಕೋರಿದ ಶಾಸಕರು, ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಶೀಘ್ರದಲ್ಲಿ ತಾಲೂಕಿನ ವರಲಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಒಟ್ಟು ೧೦೦ ಬೆಡ್‌ಗಳನ್ನು ಹೊಂದಿರುವ ಕೇಂದ್ರದಲ್ಲಿ ಸಮರ್ಪಕ ಚಿಕಿತ್ಸೆಗೆ ಕ್ರಮನಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಮತ್ತು ಡಿಎಚ್‌ಒ ಜತೆಗೆ ಚರ್ಚೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಅಗತ್ಯ ಔಷಧಿ, ಆಕ್ಸಿಜನ್ ಮತ್ತು ವ್ಯಾಕ್ಸಿನ್ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****