ಬಳ್ಳಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ: ಡಿಸಿ ಪವನಕುಮಾರ ಮಾಲಪಾಟಿ

ಬಳ್ಳಾರಿ: ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ. ಜನರು ಈ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅವರು ಸುದ್ದಿಗಾರೊಂದಿಗೆ ಭಾನುವಾರ ಮಾತನಾಡಿದರು.
ರೋಗಲಕ್ಷಣಗಳು ನಿರ್ಲಕ್ಷಿಸಬೇಡಿ, ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಿ ಮತ್ತು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸದ್ಯ 1228ಆಕ್ಸಿಜನ್ ಬೆಡ್‍ಗಳಿದ್ದು, ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಂದಾಲ್ ಎದುರುಗಡೆಯ ವಿಶಾಲ ಮೈದಾನದಲ್ಲಿ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು,ಮೇ 9ರ ವೇಳೆಗೆ ಈ ಆವರಣದಲ್ಲಿ 220 ಬೆಡ್‍ಗಳು ಲಭ್ಯವಾಗಲಿವೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ತಲಾ 50 ಆಕ್ಸಿಜನ್‍ಬೆಡ್‍ಗಳಿವೆ. ನಮ್ಮಲ್ಲಿ ಸದ್ಯಕ್ಕೆ ಲಭ್ಯವಿರುವ ಆಕ್ಸಿಜನ್ ಬೆಡ್‍ಗಳಿಗೆ ಪ್ರತಿನಿತ್ಯ 27 ಟನ್ ಆಕ್ಸಿಜನ್ ಬೇಕಾಗುತ್ತಿದ್ದು,ಸಮರ್ಪಕ ಪ್ರಮಾಣದಲ್ಲಿದೆ;ಯಾವುದೇ ರೀತಿಯ ಆಕ್ಸಿಜನ್ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದು ಮಾಲಪಾಟಿ ಅವರು ಸ್ಪಷ್ಟಪಡಿಸಿದರು.
ಜನತೆ ಆಕ್ಸಿಜನ್ ಬೆಡ್‍ಗಳು ಮತ್ತು ಆಕ್ಸಿಜನ್ ಕೊರತೆಗೆ ಸಂಬಂಧಿಸಿದತೆ ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಸದ್ಯ ಬಳ್ಳಾರಿಯ ಟ್ರಾಮ್ ಕೇರ್, ಜಿಂದಾಲ್ ಸಂಜೀವಿನಿ ಮತ್ತು ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ 108 ಐಸಿಯು ಬೆಡ್ ಗಳ ವ್ಯವಸ್ಥೆ ಇದೆ. 70 ವೆಂಟಿಲೇಟರ್ ಗಳಿದ್ದು ಇನ್ನೂ 50 ವೆಂಟಿಲೇಟರ್‍ ಗಳು ವಾರದೊಳಗೆ ಬಳ್ಳಾರಿ ಜಿಲ್ಲಾಡಳಿತಕ್ಕೆ ಸರಕಾರದಿಂದ ಬರಲಿವೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು 829 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನರು ಹೋಮ್ ಐಸೊಲೇಷನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದು,ನಮ್ಮ ಆರ್‍ಆರ್‍ಟಿ ತಂಡಗಳು ಸದಾ ಅವರ ಆರೋಗ್ಯದ ಮೇಲೆ ನಿಗಾವಹಿಸಿವೆ ಎಂದರು. ಕಳೆದ ಏಪ್ರಿಲ್ ಎರಡನೇ ವಾರದಿಂದ ಸೋಂಕು ಹರಡುವುದು ಹೆಚ್ಚಾಗಿದೆ. ಸೊಂಕಿನ ಬಗ್ಗೆ ನಿರ್ಲಕ್ಷ್ಯ ಮತ್ತು ಸೋಂಕಿನಿಂದ ಬಳಲಿ ತಡವಾಗಿ ಚಿಕಿತ್ಸೆಗೆ ಬರುತ್ತಿರುವುದರಿಂದ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.
*****