ಸಂಡೂರು,ಸಿರಗುಪ್ಪ ತಹಸೀಲ್ದಾರರ ದಿಢೀರ್ ಕಾರ್ಯಾಚರಣೆ: 5 ಜನ ನಕಲಿ ವೈದ್ಯರ ಪತ್ತೆ, ನ್ಯಾಯಾಂಗ ಬಂಧನ

ಬಳ್ಳಾರಿ: ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಯಾವುದೇ ಅಧಿಕೃತ ದಾಖಲೆಗಳು ಹೊಂದಿರದ 5 ಜನ ನಕಲಿ ವೈದ್ಯರನ್ನು ಜಿಲ್ಲಾಡಳಿತ ಪತ್ತೆಹಚ್ಚಿದೆ.
ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಸೀಜ್ ಮಾಡಲಾಗಿದ್ದು ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಸಂಡೂರು ತಹಸೀಲ್ದಾರ್ ರಶ್ಮೀ, ಸಿರಗುಪ್ಪ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ವಿವಿಧೆಡೆ ಶನಿವಾರ ದಿಢೀರ್ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಸಂಡೂರು ತಾಲೂಕಿನ ಸೋವೆನಹಳ್ಳಿಯಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಕರ್ನೂಲ್ ಮೂಲದ ಎಂ.ಷಣ್ಮಖುಡು ಹಾಗೂ ರಾಮು ಎನ್ನುವವರು ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಂಡೂರು ತಹಸೀಲ್ದಾರ್ ರಶ್ಮಿ ಎಚ್.ಜೆ ಹಾಗೂ ಆರೋಗ್ಯ ಇಲಾಖೆಯ ಡಾ.ಕೋಟ್ರೇಶ್ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ 37 ವರ್ಷದ ಷಣ್ಮುಖುಡು ಹಾಗೂ 33 ವರ್ಷದ ರಾಮು ಎನ್ನುವವರು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಅತ್ಯಗತ್ಯ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಯಾವುದೇ ಅಧಿಕೃತ ದಾಖಲೆಗಳನ್ನು ಇವರು ಹೊಂದಿರಲಿಲ್ಲ. ವೈದ್ಯಕೀಯ ಪದವಿ ಪಡೆಯದಿರುವುದು ತನಿಖೆಯಲ್ಲಿ ಕಂಡುಬಂದಿದೆ.
ತಾವು ಅಸಲಿ ಡಾಕ್ಟರುಗಳೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡಿ ಮೋಸ ಮಾಡುತ್ತಿದ್ದರು. ಈ ವ್ಯಕ್ತಿಗಳ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಲಾಗಿದ್ದು ಇವರ ವಿರುದ್ಧ ಐಪಿಸಿ 420 ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ ಹಾಗೂ ನಿಯಮ 2007 ಮತ್ತು 2009ರ ಕಲಂ 194 ಅಡಿ ಕಾನೂನು ಕ್ರಮಕೈಗೊಳ್ಳುವಂತೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೆಣತಿಕಟ್ಟೆಯಲ್ಲಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳಿರದೇ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಗುರುಬಸವರಾಜ ಎ.ಎಂ ಅವರ ಮೇಲೆ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ರಶ್ಮಿ ನೇತೃತ್ವತ ತಂಡ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಿಕೊಂಡು ಗುರುಬಸವರಾಜರನ್ನು ಬಂಧಿಸಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹರಪನಳ್ಳಿ ತಾಲೂಕಿನ ತೌಡೂರು ಗ್ರಾಮದವರಾದ 44 ವರ್ಷದ ಗುರುಬಸವರಾಜ ಅವರು ಗೆಣತಿಕಟ್ಟೆ ಜನರಿಗೆ ಅಸಲಿ ಡಾಕ್ಟರ್ ಅಂತ ನಂಬಿಸಿ ಚಿಕಿತ್ಸೆ ನೀಡುತ್ತಿದ್ದ ಎಂದು ದಾಳಿ ಸಂದರ್ಭದಲ್ಲಿ ತಿಳಿದುಬಂದಿದೆ.
ಇದೇ ರೀತಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳನ್ನಿಟ್ಟುಕೊಳ್ಳದೇ ತಾವೇ ಅಸಲಿ ಡಾಕ್ಟರ್‍ಗಳೆಂದು ನಂಬಿಸಿ ಚೋರನೂರು ಗ್ರಾಮದ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಕಲ್ಕತ್ತಾ ಮತ್ತು ಆಂಧ್ರಪ್ರದೇಶ ಮೂಲದ ವಿಜಯಕುಮಾರ್ ಮತ್ತು ವಿಶ್ವಜೀತ್ ಮೌಲ್ಲಿ ಅವರ ಕ್ಲಿನಿಕ್ ಕೂಡ ಸೀಜ್ ಮಾಡಲಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಎಚ್.ಜೆ.ರಶ್ಮೀ ಅವರು ತಿಳಿಸಿದ್ದಾರೆ.
ಸಿರುಗುಪ್ಪದಲ್ಲೂ ದಾಳಿ: ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಯಾವುದೇ ರೀತಿಯ ವೈದ್ಯಕೀಯ ಪದವಿ ಹೊಂದದೇ ಹಾಗೂ ದಾಖಲೆಗಳನ್ನಿಟ್ಟುಕೊಳ್ಳದೇ ಚನ್ನಪ್ಪ ಎನ್ನುವವರು ನಕಲಿವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿದೆ.
ಗ್ರಾಮದ ಗಾದಿಲಿಂಗೇಶ್ವರ ಮೆಡಿಕಲ್ ಸ್ಟೋರ್ ಹಿಂದುಗಡೆ ಒಂದು ಕೊಣೆಯಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚನ್ನಪ್ಪ ಎನ್ನುವ ನಕಲಿ ವೈದ್ಯ ಡಿ.ಫಾರ್ಮ್ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ಮತ್ತು ಪಿ.ಡಿ.ಹಳ್ಳಿ ಗ್ರಾಮದವರೆಂದು ತಿಳಿಸಿದ್ದಾರೆ.
ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಟ್ಟುಕೊಂಡಿರಲಿಲ್ಲ. ಅಸಲಿ ವೈದ್ಯರೆಂದು ಜನರಿಗೆ ನಂಬಿಸಿ ಚಿಕಿತ್ಸೆ ನೀಡಿ ಮೋಸ ಮಾಡುತ್ತಿದ್ದ. ಈ ವ್ಯಕ್ತಿಯ ಕ್ಲಿನಿಕ್ ಮತ್ತು ಮೆಡಿಕಲ್ ಎರಡನ್ನು ಜಪ್ತಿ ಮಾಡಿ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಟಿಎಚ್‍ಒ ಈರಣ್ಣ ಅವರು ತಿಳಿಸಿದ್ದಾರೆ.
ಡಿಸಿ ಎಚ್ಚರ: ಜಿಲ್ಲೆಯಾದ್ಯಂತ ಈ ಕಾರ್ಯಾಚರಣೆ ಮುಂದುವರಿಯಲಿದ್ದು,ನಕಲಿ ವೈದ್ಯರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಪವನಕುಮಾರ ಮಾಲಪಾಟಿ ಅವರು ಎಚ್ಚರಿಸಿದ್ದಾರೆ.
ಹಳ್ಳಿ ಜನಗಳ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರರುಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
*****