ಅನುದಿನ ಕವನ-೧೨೭, ಕವಿ: ಟಿ.ಕೆ.ಗಂಗಾಧರ ಪತ್ತಾರ, ಕವನದ ಶೀರ್ಷಿಕೆ: ಕೊರೋನಾಸುರಗೆ ಚರಮಗೀತೆ

ಕೊರೋನಾಸುರಗೆ ಚರಮಗೀತೆ
*****
ಒಂದು ಹನಿ ಮಸಿಯಿಂದ
ಕೋಟಿ ದುರ್ಜನ ಮನಕೆ
ಚಾಟಿ ಏಟಿನ ಬಿಸಿಯ ಮುಟ್ಟಿಸುವ ಛಾತಿ
ಭಿನ್ನ ಚಿಂತನೆಯಲ್ಲಿ
ಹೊಸದೃಷ್ಟಿ ಕೋನದಲಿ
ಆ ಕೊರೋನಾಸುರನ ಓಡಿಸುವ ಕ್ರಾಂತಿ

ಹೊರಗೆ ಹೋದರೆ ನೋವು
ಬರಬಹುದು ಆ ಸಾವು
ಹಾಕಿಕೊಳ್ಳುವ ತಪ್ಪದೇ ಫೇಸುಮಾಸ್ಕು
ಹಸ್ತ ಲಾಘವ ಬೇಡ
ಕೈಮುಗಿದು ನಮಿಸೋಣ
ಆಗಾಗ ಕೈತೊಳೆವ ತೊಡೆಯೋಣ ರಿಸ್ಕು

ಜಗವ ಕಾಡುವ ದುರುಳ
ದುಷ್ಟ ರೋಗಕೆ ರೇಗಿ
ತುಡಿವೆದೆಗೆ ಧೈರ್ಯ ಸಾಹಸ ಮೂಲಶಕ್ತಿ
ಹೈರಾಣು ಮಾಡುವಾ
ವೈರಾಣು ಓಡಿಸುವ
ಲಸಿಕೆ ವ್ಯಾಕ್ಸೀನಿಂದ ಕೊರೋನಾಗೆ ಮುಕ್ತಿ

ಸಿಡಿಲೊಡಲ ಕಡಲಿನಲಿ
ಕುದಿದು ಜ್ವಾಲಾಮುಖಿಯು
ಸಂಘರ್ಷದಾ ಬೆಂಕಿಹೂ ಅರಳಬೇಕು
ನೀತಿ ನಿಷ್ಠೆಯ ಮರೆತು
ಆಳುವ ಅಯೋಗ್ಯರನು
ಕತ್ ಹಿಡಿದು ಕಿತ್ ಎಸೆಯೆ ಜನ ಕೆರಳ ಬೇಕು

ಆ ಕೊರೋನಾಸುರನ
ಸರ್ವನಾಶಕೆ ಶ್ರಮಿಸಿ
ಜಗದಿ ನೆಮ್ಮದಿ ಶಾಂತಿ ನೆಲೆಸೋಣ ಬನ್ನಿ
ಶ್ರಮದ ಬೆವರಲಿ ರಕ್ತ
ಅಭಿಷೇಕ ಮಾಡಿಸುತ
ಚರಮಗೀತೆಯ ಅದಕೆ ಹಾಡೋಣ ಬನ್ನಿ
~~~~~~~~~~~~~~~~~~~~
-ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ
ಚಲನವಾಣಿ : ೯೦೦೮೨೨೬೭೦೨
~~~~~~~~~~~~~~~~~~~~