ಅಮ್ಮ ಅಂದ್ರೆ….
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ಕನ್ನಡದ ತೇರು;
ಕೋಟಿಗಿಂತ ಏರು!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ
ಸಂಸ್ಕೃತಿಯ ಸೂರು;
ಹದಭರಿತ ಸಾರು!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ಹೊನ್ನೀರಿನ ಸೋನೆ;
ಹಸಿರ ಕಾಯ್ವ ಸೇನೆ!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ತೊನೆದಾಡುವ ತೆನೆ;
ಬಾಗಿ ನಮಿಪ ಗೊನೆ!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ವಸುಂಧರೆಯ ಅಕ್ಕರೆ;
ಹಾಲು ಹಯಿನು ನಕ್ಕರೆ!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ಹಾಡು ಪಾಡಿನ ಹೊತ್ತಿಗೆ;
ಕೌದಿಯಂತೆ ಬೆಚ್ಚಗೆ!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ಮಧು ಹನಿದ ರೀತಿ;
ಬೆಳುದಿಂಗಳ ನೀತಿ!
ಅಮ್ಮ ಅಂದ್ರೆ
ಅಷ್ಟಿಷ್ಟಲ್ಲ?
ಕಡಲ ತೆರೆಯ ಮುದ್ದು;
ನೋವ ನೀಗುವ ಮದ್ದು!
-ವಿಜಯಕಾಂತ ಪಾಟೀಲ
ಹಾನಗಲ್
*****
(ಕವಿ, ಲೇಖಕ ವಿಜಯಕಾಂತ ಪಾಟೀಲ ಅವರ ‘ಅಮ್ಮ ಅಂದ್ರೆ ಅಷ್ಟಿಷ್ಟಲ್ಲ….’ ಮಕ್ಕಳ ಕವನ ಸಂಕಲನದಿಂದ ಈ ಕವಿತೆ ಆಯ್ದುಕೊಳ್ಳಲಾಗಿದೆ.
ಪ್ರಕಾಶಕರು: ಸಂಸ್ಕೃತಿ ಪ್ರಕಾಶನ, ಬಳ್ಳಾರಿ)