ಅನುದಿನ ಕವನ-೧೩೦, ಕವಿ: ಎ ಎನ್ ರಮೆಶ್ ಗುಬ್ಬಿ, ಕವನದ ಶೀರ್ಷಿಕೆ: ನೆನಪಾದಳು ಅಮ್ಮ….

“ವಿಶ್ವದ ಸಮಸ್ತ ತಾಯಿ ಹೃದಯಗಳಿಗೂ ಅಂತರರಾಷ್ಟ್ರೀಯ ಅಮ್ಮಂದಿರ ದಿನದ ಅಕ್ಕರೆಯ ಶುಭಾಶಯಗಳು”

ತಾಯ್ತನದ ಅನನ್ಯ ಗುಣಧರ್ಮದಿಂದಲೇ ಪ್ರತಿ ಹೆಣ್ಣುಜೀವ ದಿವ್ಯದೈವವಾಗಿ ಕಾಣುವುದು. ಇಳಿವಯಸ್ಸಿನ ತಾಯ್ತಂದೆ ಅತ್ತೆಮಾವ, ತಾರುಣ್ಯದ ಪತಿ, ಪುಟ್ಟ ಮಕ್ಕಳು ಪ್ರತಿಯೊಬ್ಬರನ್ನು ಸಮಾನ ಆಸ್ಥೆ, ಮಮತೆ, ವಾತ್ಸಲ್ಯಗಳಿಂದ ಪೊರೆವ ಹೆಣ್ಣು ಪ್ರತಿಮನೆಯ ಪ್ರೀತಿಯ ಕಣ್ಣು. ಏನಂತೀರಾ..?. ಒಂಬತ್ತು ತಿಂಗಳ ಹಿಂದೆ ಮರಳಿಬಾರದ ಊರಿಗೆ ತೆರಳಿದ ಅಮ್ಮನಿಗೆ ಅರ್ಪಣೆ, ಅನುಕ್ಷಣ ಕಾಡುವ ಅವಳ ನೆನಪಿಗೆ ಸಮರ್ಪಣೆ ಈ ಕವಿತೆ”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇

ನೆನಪಾದಳು ಅಮ್ಮ..

ಮೂರು ಮಕ್ಕಳಲ್ಲಿ ನಡುವಿನವನೆಂದು
ನಡುವಿಗೇ ಕಟ್ಟಿಕೊಂಡು ಬೆಳೆಸಿದಳು
ಕಿರಿಯ ಮಗನೆಂದು ಕಣ್ರೆಪ್ಪೆಯಂಚಲ್ಲೆ
ಕಾಪಿಟ್ಟು ಮುದ್ದುಮಾಡಿ ಲಾಲಿಸಿದಳು
ಆ ನನ್ನಮ್ಮ ಇಂದು ಬರಿಯ ನೆನಪಷ್ಟೆ..!

ನಿತ್ಯವೂ ತನ್ನಿಷ್ಟಕ್ಕಿಂತ ನನಗಿಷ್ಟವಾದ್ದನ್ನೆ
ಮಾಡಿ ಅಕ್ಕರೆಯಲಿ ಉಣಬಡಿಸಿದ್ದೆ ಹೆಚ್ಚು
ಅವಳಿಗೆ ನಾನು ಎಲ್ಲರಿಗಿಂತ ಅಚ್ಚುಮೆಚ್ಚು
ನಡೆ ನುಡಿಯಲಿ ನಾನವಳ ಪಡಿಯಚ್ಚು
ಆ ನನ್ನಮ್ಮ ಈಗ ಬರಿಯ ನೆನಪಷ್ಟೆ.!

ಅಪ್ಪನ ಹೆಗಲಿನಲಿ ಜೋತು ಬಿದ್ದಿದ್ದಕಿಂತ
ಅಮ್ಮನ ಮಡಿಲಲಿ ಆತುಕೊಂಡಿದ್ದೆ ಹೆಚ್ಚು
ನನ್ನೆಲ್ಲ ಸಂಭ್ರಮಕೂ ದನಿಯಂತಿದ್ದವಳು
ಬೇಗುದಿ ಸಂಕಟಕೆ ಕಿವಿಯಾಗುತ್ತಿದ್ದವಳು
ಅಂತಹ ನನ್ನಮ್ಮನಿಂದು ಬರೀ ನೆನಪಷ್ಟೆ.!

ಹಾಸಿಗೆ ಹಿಡಿದಿದ್ದರೂ ನನ್ನ ಕಂಡೊಡನೆ
ಕಾಫಿಮಾಡುವೆನೆಂದು ಮೇಲೇಳುತ್ತಿದ್ದವಳು
ಸಾವಿನಾ ಕಪಿಮುಷ್ಟಿಯಿಂದಲೂ ನಾನವಳ
ಕಾಯುವೆನೆಂದು ಕಡೆತನಕ ನಂಬಿದ್ದಳು.!
ಆ ನನ್ನಮ್ಮ ಇಂದು ಬರಿಯ ನೆನಪಷ್ಟೆ..!

ನನ್ನೆದುರು ಕಣ್ಮುಚ್ಚಿದರೆ ನೊಂದೆನೆಂದು
ನಾ ದೂರವಿದ್ದಾಗ ದೈವಾಧೀನಳಾದವಳು
ನನ್ನ ಕಂಬನಿಯೊರೆಸುವ ಬೆರಳಾಗಿದ್ದವಳು
ಈಗ ಕಣ್ಣಂಚಲ್ಲೆ ಹನಿಯಾಗಿ ನಿಂತಿಹಳು
ಮಮತೆಯ ಕಣ್ಣೀಗ ಬರಿಯ ನೆನಪಷ್ಟೆ.!

ಬದುಕಿನ ಅವಿಭಾಜ್ಯವಾಗಿದ್ದವಳು ಎಂದೆಂದು
ನೆನಪಷ್ಟೇ ಈ ವಿಶ್ವ ಅಮ್ಮಂದಿರ ದಿನದಂದು
ನಿಮಗಿದೋ ತಾಯಂದಿರ ದಿನದ ಶುಭಕಾಮನೆ
ಉಸಿರಿರುವ ತನಕ ನೋಯದಂತೆ ನರಳದಂತೆ
ಕಾಪಿಟ್ಟುಕೊಳ್ಳಿ ತಾಯಿದೈವವ ಎಂಬ ವಿಜ್ಞಾಪನೆ,!

-ಎ.ಎನ್.ರಮೇಶ್. ಗುಬ್ಬಿ.
*****