‘ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ’ 1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ ಬಿಎಸ್‍ವೈ

ಬಳ್ಳಾರಿ: ಜಿಲ್ಲೆಯ ಜಿಂದಾಲ್ ಕಾರ್ಖಾನೆ ಬಳಿ ವಿಶಾಲ ಮೈದಾನದಲ್ಲಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದ ವರ್ಚುವಲ್ ಮೂಲಕ ತಾತ್ಕಾಲಿಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್-19ರ ಎರಡನೇ ಅಲೆಯು ನಮ್ಮ ದೇಶವನ್ನು ಹಾಗೂ ನಮ್ಮ ರಾಜ್ಯವನ್ನು ಅತ್ಯಂತ ತೀವ್ರವಾಗಿ ಬಾಧಿಸುತ್ತಿದೆ. ಸರ್ಕಾರ ಸೋಂಕಿನ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಸರ್ಕಾರದ ಈ ಪ್ರಯತ್ನದಲ್ಲಿ ಜಿಂದಾಲ್ ಸಂಸ್ಥೆ ಸೇರಿದಂತೆ ಖಾಸಗಿ ಸಂಸ್ಥೆಗಳೂ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.
ಅತ್ಯಂತ ಸುಸಜ್ಜಿತ ಸಾವಿರ ಹಾಸಿಗೆಗಳ ಸೌಲಭ್ಯವುಳ್ಳ ಬೃಹತ್ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ ಇದಾಗಿದೆ. ಸಕಲ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಎದುರಾಗಿದ್ದು, ಆಮ್ಲಜನಕದ ಕೊರತೆ. ಇಂತಹ ಸಂಕಟದ ಪರಿಸ್ಥಿತಿಯಲ್ಲಿ ಈ ಕೋವಿಡ್ ಕೇರ್ ಸೌಲಭ್ಯವು ಈ ಭಾಗದ ಸಂಜೀವಿನಿಯಾಗಲಿದೆ ಎಂಬ ಆಶಾಭಾವನೆಯನ್ನು ಬಿ ಎಸ್ ವೈ ಅವರು ವ್ಯಕ್ತಪಡಿಸಿದರು.
ಈ ಆಸ್ಪತ್ರೆಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಜಿಂದಾಲ್ ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್‍ಲೈನ್ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲ ಸೌಕರ್ಯವನ್ನು ಕೇವಲ 15 ದಿನಗಳಲ್ಲಿ ನಿರ್ಮಿಸಿದ್ದು, ದಾಖಲೆಯೇ ಸರಿ ಎಂದರು.
ರೋಗಿಗಳಿಗೆ ನೇರ ಆಮ್ಲಜನಕ ಪೂರೈಸುವ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಜೆಎಸ್‍ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ. ವೈದ್ಯರು/ ತಜ್ಞರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ, ಮೇಲ್ವಿಚಾರಕರು ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ಹೊಂದಿದ್ದು, ಅವರು ವಿವಿಧ ಪಾಳಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಮಾತನಾಡಿ ರಾಜ್ಯದಲ್ಲಿಯೇ ಅತಿದೊಡ್ಡ ಸುಸಜ್ಜಿತ ಸೌಕರ್ಯಗಳುಳ್ಳ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಲಿಕ ಆಸ್ಪತ್ರೆ ಇದಾಗಿದೆ. ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಈ ಕೊರೊನಾದಂತ ಸಂದಿಗ್ಧ ಸಮಯದಲ್ಲಿ ಜಿಲ್ಲೆಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
4.8ಕಿ.ಮೀ ದೂರದಿಂದ ಆಕ್ಸಿಜನ್ ಅನ್ನು ಪೈಪ್‍ಲೈನ್ ಮೂಲಕ ಈ ತಾತ್ಕಾಲಿಕ ಆಸ್ಪತ್ರೆಗೆ ತರಲಾಗಿದೆ; 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 15 ದಿನಗಳ ಕಾಲ ಜಿಂದಾಲ್ ಹಾಗೂ ಜಿಲ್ಲಾಡಳಿತದ ನಿರಂತರ ಪರಿಶ್ರಮದ ಫಲವಾಗಿ ಈ ಆಸ್ಪತ್ರೆ ತಲೆಎತ್ತಿದೆ ಎಂದರು.
ಕೊರೊನಾ ಸೊಂಕಿತರಾಗಿ ಚಿಕಿತ್ಸೆಗೆ ಈ ತಾತ್ಕಾಲಿಕ ಆಸ್ಪತ್ರೆಗೆ ಆಗಮಿಸುವವರು ಬೇಗ ಗುಣಮುಖರಾಗಿ ನಗುಮೊಗದಿಂದ ಮನೆಗೆ ತೆರಳಲಿ; ಆದಷ್ಟು ಬೇಗ ಕೊರೊನಾ ನಿಯಂತ್ರಣಕ್ಕೆ ಬರಲಿ ಎಂದರು.
ಜಿಲ್ಲೆ ಗೆದ್ದರೇ ದೇಶ ಗೆದ್ದಂತೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ;ಅವರ ನುಡಿಯನ್ನು ಅಕ್ಷರಷಃ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರು ಮಾತನಾಡಿ, ದೇಶ ಮೊದಲು ಎಂಬುದು ನಮ್ಮ ಜಿಂದಾಲ್‍ನ ಘೋಷವ್ಯಾಕ್ಯವಾಗಿದೆ. ಈ ನಿಟ್ಟಿನಲ್ಲಿ ಕೊರೊನಾದಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುವುದರ ಮೂಲಕ ಸರಕಾರದೊಂದಿಗೆ ಕೈಜೋಡಿಸಿದ್ದೇವೆ ಎಂದರು.
ಆಕ್ಸಿಜನ್ ಉತ್ಪಾದನಾ ಘಟಕಗಳ ಮೂಲಕ ನೇರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.ಕರ್ನಾಟಕದ ಜನತೆ ಅದರಲ್ಲೂ ವಿಶೇಷವಾಗಿ ಉತ್ತರಕರ್ನಾಟಕದ ಗ್ರಾಮೀಣ ಪ್ರದೇಶದ ಜನರಿಗೆ ಇದನ್ನು ಅರ್ಪಿಸುತ್ತೇನೆ; ಇದರ ಪ್ರಯೋಜನ ಪಡೆದುಕೊಂಡು ಆದಷ್ಟು ಬೇಗ ಗುಣಮುಖರಾಗಿ ಎಂದು ಹಾರೈಸುತ್ತೇನೆ ಎಂದರು.
ಸಂಡೂರು ಶಾಸಕ ತುಕಾರಾಂ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ಜಿಂದಾಲ್‍ನ ವಿನೋದ ನೋವೆಲ್, ಮಂಜುನಾಥ ಪ್ರಭು ಮತ್ತಿತರರು ಇದ್ದರು.
*****