ಬುದ್ಧ ಬೆಳಕು ಕವನ ಸಂಕಲನ ಕವಿ: ಡಾ ಅರ್ಜುನ ಗೊಳಸಂಗಿ ಗದಗ, ಪರಿಚಯ: ಡಾ. ಯಾಕೊಳ್ಳಿ.ಯ.ಮಾ, ಸವದತ್ತಿ

ಪ್ರಜ್ಞೆ, ಮೈತ್ರಿ, ಪ್ರೀತಿ, ಕರುಣೆ ಶಾಂತಿ ಮತ್ತು ತ್ಯಾಗದ ಮಹತ್ವವನ್ನು ವಿಶ್ವಕ್ಕೆ ಬೋಧಿಸಿ, ತನ್ನ ಧಮ್ಮದಲ್ಲಿ ಮೇಲು ಕೀಳು, ಮೌಢ್ಯತೆ, ಅಸಮಾನತೆಗೆ ಅವಕಾಶ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆಯನ್ನು ತುಂಬಿದ ಮಹಾನ್ ಜ್ಞಾನಿ ತಥಾಗತ ಭಗವಾನ್ ಬುದ್ಧರ ಜಯಂತಿ ಇಂದು(ಮೇ 26). ಬುದ್ಧ ಪೂರ್ಣಿಮೆ ಹಿನ್ನಲೆಯಲ್ಲಿ ಸಾಹಿತಿ, ಸಂಶೋಧಕ, ಸಂಘಟಕ ಡಾ.‌ಅರ್ಜುನ ಗೊಳಸಂಗಿ ಅವರ “ಬುದ್ಧ ಬೆಳಕು” ಕವಿತಾ ಸಂಕಲನದ ಬಗ್ಗೆ ಬೆಳಕು ಚೆಲ್ಲಿದ್ದಾರೆ ಹಿರಿಯ ಸಾಹಿತಿ ಸವದತ್ತಿಯ ಡಾ. ಡಾ.ಯಾಕೊಳ್ಳಿ.ಯ.ಮಾ ಅವರು.👇

ಬುದ್ಧ ಬೆಳಕು ಕವನ ಸಂಕಲನ
ಕವಿ: ಡಾ ಅರ್ಜುನ ಗೊಳಸಂಗಿ
ಪರಿಚಯ: ಡಾ. ಯಾಕೊಳ್ಳಿ.ಯ.ಮಾ, ಸವದತ್ತಿ

ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರೂ,ಹುಲಕೋಟಿ ಪದವಿ ಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕರೂ ಕವಿ,ವಿಮರ್ಶಕ ಜನಪದ ಸಾಹಿತಿ, ಹೋರಾಟಗಾರ,,ಹೀಗೆ ಹಲವಾರು ಪದಗಳಲ್ಲಿ ಬಣ್ಣಿಸ ಹೊರಟರೂ ಕೈಗೆ ಸಿಗದ ಅಸೀಮ ವ್ಯಕ್ತಿತ್ವ ಡಾ.ಅರ್ಜುನ ಗೊಳಸಂಗಿಯವರದು.ಮೃದು ಮಾತು,ದಿಟ್ಟ ನಡೆ,ಹಿಡಿದ ಛಲ ಬಿಡದೆ ಸಾಧಿಸುವ ಛಾತಿ,ತನ್ನ ನೆಲ ಜನ ಬದುಕಿನ ಬಗ್ಗೆ ಅಪಾರ ಪ್ರೀತಿ ಗೌರವ ಹೀಗೆ ಡಾ. ಅರ್ಜುನ ಗೊಳಸಂಗಿ ಯವರನ್ನು ಬಣ್ಣಿಸಬಹುದು.ಕನ್ನಡ ಅಧ್ಯಾಪಕರಾಗಿ ಸದಾ ವಿದ್ಯಾರ್ಥಿಪ್ರಿಯ ಉಪನ್ಯಾಸಕರೂ ಆಗಿ ಬೋಧನೆಯನ್ನು ಮೊದಲು ಪೂರೈಸಿ ನಂತರವಷ್ಟೇ ಉಳಿದ ಕಡೆಗೆ ತಮ್ಮ ಗಮನ ನೀಡುವ ಬದ್ಧತೆಯೂ ಅವರ ಇನ್ನೊಂದು ಗುಣ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ,ಪಠ್ಯಪುಸ್ತಕ ಮಂಡಳಿಯ ಸದಸ್ಯನಾಗಿ , ಕೇಂದ್ರ ಸಾಹಿತ್ಯ ಅಕಾಡೆಮಿಯ ಕರ್ನಾಟಕದ ಪ್ರತಿನಿಧಿಯಾಗಿ,ಗದಗ ತೋಂಟದಾರ್ಯ ಮಠದ ಡಾ.ಎಂ .ಎಂ ಕಲಬುರ್ಗಿ ಸಂಶೋಧನ ಸಂಸ್ಥೆಯ ಸಂಚಾಲಕರಾಗಿ ಹೀಗೆ ಹಲವು ಹತ್ತು ಕಡೆ ಹರಿದು ಹಂಚಿ ಹೋದರೂ ,ಸ್ನೇಹವಲಯಕ್ಕೆ ಸರಳ ಸಿಗುವ ಸಾದಾ ಸೀದಾ ಮನುಷ್ಯರಾಗಿಯೂ ನಮ್ಮ ಹಮನ ಸೆಳೆಯುತ್ತಾರೆ ಡಾ.ಅರ್ಜುನ ಗೊಳಸಂಗಿ.
ಇಲ್ಲಿ ನಾನು ಅವರ ಪರಿಚಯಕ್ಕೆ ಬರೆದ ಮಾತುಗಳು ಅವರನ್ನು ಬಣ್ಣಿಸಲು ಬಳಸಿದ ಕಡಿಮೆ ಮಾತುಗಳು ಎಂದರೆ .ಇನ್ನೂ ಅವರ ವ್ಯಕ್ತಿತ್ವ ಚಿತ್ರಣಕ್ಕೆ ಹೆಚ್ಚಿನ ಭಾಗ ಬೇಕಿತ್ತು ಎನ್ನಿಸುತ್ತದೆ.ಆದರೆ ನಾನು ಹೊರಟಿರುವದು ಡಾ.ಅರ್ಜುನ ಗೊಳಸಂಗಿಯವರ ವ್ಯಕ್ತಿಚಿತ್ರ ಬರೆಯಲು ಅಲ್ಲ,ಅವರ ಪ್ರಥಮ ಕವನ ಸಂಕಲನ ‘ಬುದ್ಧ ಬೆಳಕು’ ಕುರಿತು ಬರೆಯಲು ಹೊರಟಿದ್ದೇನೆ.

ಡಾ.ಗೊಳಸಂಗಿಯವರದು ಅವರೇ ಹೇಳಿಕೊಂಡಂತೆ ” ಮೂಲತಃ ಸಂಶೋಧನೆ ಮತ್ತು ವಿಮರ್ಶೆ ಆಸಕ್ತಿಯ ಕ್ಷೇತ್ರ.” ಆದರೆ ಅವರೊಳಗಿನ ಕವಿ ಅವರಲ್ಲಿನ ಕವಿತೆಯನ್ನು ಹೊರತಂದಿರುವದನ್ನು ” ಆದರೂ ನಾನು ಹ಼ಲ್ಞಲಿಯ ಪರಿಸರದಿಂದ ಬಂದಿದ್ದರಿಂದ ದಲಿತ ಲೋಕದ ಕೆಲವು ಅನುಭವಗಳಿಗೆ ಕಾವ್ಯ ರೂಪ ತರುವ ಪ್ರಯತ್ನ‌ಮಾಡಿದ್ದೇನೆ ” ಎಂದಿದ್ದಾರೆ. ಸಾಹಿತಿಯಾಗಿ ಡಾ.ಗೊಳಸಂಗಿ ೧೯೯೫ ರಲ್ಲಿ ಮೊದಲ ಹೆಜ್ಜೆಯನ್ನು ಸಂಶೋಧಕನಾಗಿ ಇರಿಸಿದವರು. ಸುಮಾರು ೧೫ ರಷ್ಟು ಕೃತಿಗಳು ( ಸ್ವತಂತ್ರ ಮತ್ತು ಸಂಪಾದಿತ) ಬಂದ ಮೇಲೆ ಅವರ ಮೊದಲ ಸಂಕಲನ ಪ್ರಕಟವಾಯಿತು ಎನ್ನುವದೂ ಇಲ್ಲಿ ಮುಖ್ಯ.

ಈ ಸಂಕಲನದಲ್ಲಿ ಮೂವತ್ತು ಕವಿತೆ ಮತ್ತು ಕೆಲವು ಹನಿಗಳು ಇವೆ.ಮುಖ್ಯವಾಗಿ ದಲಿತ ಬದುಕಿನ ನೋವು,ತನ್ನವರ ಬದುಕು ಹೀಗೇಕೆ ಎಂಬ ಜಿಜ್ಞಾಸೆ,ಈ ನೋವಿಗೆ ಕಾರಣರಾರು ಎಂಬ ಪ್ರಶ್ನೆ,ಅದನ್ನು ಕಿತ್ತೊಗೆಯಬೇಕು ಎಂಬ ಉತ್ಸಾಹ ಇವೆಲ್ಲ ಪ್ರಧಾನವಾಗಿ ಕಾವ್ಯ ರೂಪ ಪಡೆದಿವೆ. ಇವುಗಳೊಂದಿಗೆ ಮೂರು ಕವಿತೆಗಳಲ್ಕಿ ಇಲ್ಲಿ ಬುದ್ಧ ಕವಿತೆಯಾಗಿದ್ದಾನೆ.

” ಬುದ್ಧ ಬೆಳಕು ” ದಲಿತ ಸಾಹಿತ್ಯ ಪರಿಷತ್ತಿನಿಂದ ೨೦೧೧ ರಲ್ಲಿ ಮೊದಲು ಪ್ರಕಟವಾದರೂ ಇಲ್ಲಿನ ಕವಿತೆಗಳು ಬಹಳ ಹಿಂದಿನಿಂದ ಬರೆಯುತ್ತಾ ಬಂದವು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಭಾರತಿಯಲ್ಲಿಯೆ ಅವರು ಓದುವಾಗಲೇ ಕವಿತೆಗಳನ್ನು ಬರೆದಿದ್ದರೂ ಅವು ಸಂಕಲನವಾಗಿರಲಿಲ್ಲ.

ಬುದ್ಧನ ದಾರಿ ಎಲ್ಲ ಜನಪರ, ನೆಲಪರ, ಹೋರಾಟಪರ, ಮಾನವೀಯ ಪರ ಜನರ ದಾರಿ,ಹಾಗೆಯೆ ಗೊಳಸಂಗಿಯವರ ದಾರಿಯೂ ಹೌದು.ಹಾಗಾಗಿ ಡಾ.ಅಂಬೆಡ್ಕರ್ ಅವರಷ್ಟೇ ಅವರು ಬುದ್ಧನನ್ನು ಪ್ರೀತಿಸುತ್ತಾರೆ.
ಅವರಿಗೆ ಬುದ್ಧ ದಲಿತರ ,ದಮನಿತರ ಬದುಕಿಗೆ ಬೆಳಕು ನೀಡಿದ ಮಹಾ ಬೆಳಕು.ಅಂತೆಯೆ ಅವರು ಹೇಳುವದು

ಬತ್ತಿದ ಕಂಗಳ‌ನೋಟಕೆ
ಎದೆಯ ಅಂತರಂಗಕೆ ಸಮಾನತೆಯ ಬೆಳಕು
ಅದು ಬುದ್ಧ ಬೆಳಕು

ಅವರ ಪ್ರಕಾರ ಬುದ್ಧ ಮನೆ ಬಿಟ್ಟು ಹೋದುದು ಮಹತ್ವದಲ್ಲ. ಬುದ್ಧನೆಂದರೆ ಪ್ರೀತಿ ಶಾಂತಿ ಕರುಣೆಯ ಕಿರಣ .ಅದನ್ನೆ ಕವಿತೆಯ ಈ ಸಾಲುಗಳು

ಬುದ್ಧನಾಗುವದೆಂದರೆ
ಕಾಡನರಸಿ ಓಡಿ ಹೋಗುವದಲ್ಲ
ನೀರಲ್ಲಿ‌ಮುಳುಗಿ ಏಳುವದಲ್ಲ
ಮರದಡಿ ಕುಳಿತು ಧ್ಯಾನ‌ಮಾಡುವದೂ ಅಲ್ಲ,
ಪ್ರೀತಿ – ಕರುಣೆ – ಶಾಂತಿಯ ಕಿರಣ
ಅಂತರಂಗಕ್ಕಿ಼ಳಿದಾಗ ನಾವು ಮನುಷ್ಯರಾಗುವದು
ಅದಕ್ಕೆ ಬೇಕು ಬುದ್ಧ ಬೆಳಕು

ಎನ್ನುತ್ತವೆ.ಕವಿಗೆ ಬುದ್ದ ಮರದಡಿ ಕುಳಿತು ಧ್ಯಾನ ಮಾಡಿ ಜ್ಞಾನ ಸಾಧಿಸಿದನೆಂಬುದು‌ ಮಹತ್ವದ್ದಾಗಿಲ್ಲ. ಅದರ ಬದಲು ಅವನ ಶಾಂತಿ – ಕರುಣೆ – ಪ್ರೀತಿಗಳು ಮುಖ್ಯವೆನಿಸಿವೆ. ಮನುಷ್ಯರಾಗುವದು ಮುಖ್ಯ ಪ್ರಶ್ನೆಯಾಗಿದೆ. ಸಹಜವಾಗಿಯೆ ಬುದ್ಧ ಮತ್ತು ಬಸವಣ್ಣನವರು ಅವರಿಗೆ ಆದರ್ಶವಾಗಿದ್ದಾರೆ.ಅವರೆಡೂ ಬೇರೆ ಬೇರೆ ಕಾಲಘಟ್ಟದಲ್ಕಿ ನಡೆದ ಎರಡು ಭಿನ್ನ ಆದರೆ ಒಂದೇ ಮಾರ್ಗದ ನಡೆಗಳು ಎನ್ನಿಸಿವೆ.ಅಂತೆಯೆ ಕವಿ

ಮಹಾಬೋಧಿಯ ಜ್ಞಾನದ ಕಿರಣ
ಮಹಾಮನೆಯ ಅನುಭವ ಹೂರಣ
ಹೊರಟಿತು ಬಿಕ್ಕು ದಂಡು
ಕಲ್ಯಾಣ ನಾಡ ಶರಣರ ದಂಡು ( ಚೈತನ್ಯದ ಬೆಳಕು)

ಎಂದು ಎರಡನ್ನು ಸಮೀಕರಿಸುತ್ತಾರೆ. ಆದರೆ ವರ್ತಮಾನಕ್ಕೆ ಬಂದರೆ ಆತಂಕ ಕಾಡುತ್ತದೆ.ಅಂದಿನ ಬುದ್ಧ ಬಸವರ ದಾರಿಗಳು ಇಂದುಇಲ್ಲಿ ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಎಲ್ಲರದೂ ಆಗಿದೆ. ” ಬುದ್ಧನ ನಾಡಿನಲ್ಲಿ” ಎಂಬ ಕವಿತೆಯಲ್ಲಿ ಕವಿ –

ಬುದ್ಧನಾ ನಾಡಿನಲ್ಲಿ ಇಂದು
ಅಂದಿನ ಬೆಳಕೇ ಇಲ್ಲ
ಕಾರ್ಗತ್ತಲ ಖಂಡ

ಎಂದು ವಿಷಾದ ಪಡುತ್ತಾರೆ.ಬೌದ್ಧ ಪೂರ್ಣಿಮೆಯಂದೇ ಬಾಂಬ್ಹಣ್ಣು ನೆಲಕ್ಕೆ ಬೀಳಬೇಕೆ? ಎಂದು ನ಼ೊಯುತ್ತಾರೆ‌
ಇದು ಸೂರ್ಯನ ನಾಡು ಎಂದು ನಾವು ಬಹಳಷ್ಟು ಸಲ ಹೆಮ್ಮೆ‌ ಪಡುವವರನ್ನು ಕಾಣುತ್ತೇವೆ.ಆದರೆ ಇಲ್ಲಿನ ಬಡವರಿಗೆ, ದಲಿತರ ಬಾಳಿಗೆ ಬೆಳಕು ಸಿಗದೇ ಇರುವದು ಆ ನೋವನ್ನು ಸ್ವತಃ ಉಂಡ‌ ಕವಿಗೆ ಅರಿವಿಗೆ ಬಂದಿದೆ. ಅದಕ್ಕೆ

ನಾ ಇರುವ ನಾಡಲ್ಲಿ
ಸೂರ್ಯ ಮೂಡುವದೇ ಇಲ್ಲ ( ಸೂರ್ಯ‌ಮೂಡದ ನಾಡು)
ಎಂದು ವಿಷಾದ ಪಡುತ್ತಾರೆ‌‌. ಆತನಿಗೆ‌ ಮೂಡಬಾರದೆಂಬ ಮುನಿಸೇನೂ ಇಲ್ಲ.ಆದರೆ ಮೂಡದಂತೆ ತಡೆವ ಹಸ್ತಗಳು ಇಲ್ಲಿರುವದೇ ಅದಕ್ಕೆ ಕಾರಣ ಎಂಬ ಅರಿವು‌ ಕವಿಗಿದೆ.ಅಂಥ ದುರುಳ ಹಸ್ತಗಳೇ ತನ್ನವರನ್ನು

ಶತ ಶತಮಾನದಿಂದಚ
ನನ್ನ ಜನಾಂಗದ ಮಾನವನ್ನೇ ಹರಾಜಿಗಿಟ್ಟು
ದೌರ್ಜನ್ಯ ಮಾಡುತ್ತಲೇ ಬಂದವರ

ಕತೆ ಹೇಳಲೇ ನಿಮಗೆ ಎಂದು ಪ್ರಶ್ನಿಸುತ್ತಾರೆ. ಇಲ್ಲಿನ ಅಮಾಯಕರ ಬಲಿ ಅವರನ್ನು ಕಾಡಿದೆ.” ಧರ್ಮದ ಹೆಸರಿನಲಿ ನಿತ್ಯ ದಲಿತರ ಮಾರಣ ಹೋಮ ,ಸಜೀವ ದಹನ,ಬೀದಿಲಿ ಬೆತ್ತಲೆ ಮೆರವಣಿಗೆ,ದೈತ್ಯರ ಅಟ್ಟಹಾಸ ಅಡಗುವದು ಯಾವಾಗ ? ಎಂಬ ಪ್ರಶ್ನೆ ಕಾಡಿದೆ. ದಲಿತ ಕವಿ ಸಿದ್ದಲಿಂಗಯ್ಯನವರು ಯಾರಿಗೆ ಬಂತು ಸ್ವಾತಂತ್ರ್ಯ ಎಂದು ಕೇಳಿದರೆ ಈ ಕವಿ ” ನಮ್ಮವರಿಗೆಲ್ಲಿದೆ ಸ್ವಾತಂತ್ರ್ಯ ?” ಎಂದು ಪ್ರಶ್ನಿಸುತ್ತಾರೆ. ಸರಕಾರ,ಸಾಹಿತಿಗಳು,ಜನಪ್ರತಿನಿಧಿಗಳು ಲಕ್ಕುಂಡಿ ಉತ್ಸವದಲ್ಲಿ ಮುಳುಗೆದ್ದಾಗ,ಅದು ಕೇರಿಯ , ದುಡಿವವರ ಉತ್ಸವವಾಗದ ಬಗ್ಗೆ ಕವಿ ವಿಷಾದ ಪಡುತ್ತಾನೆ.

ಆದರೂ ಕವಿಯ ಆಶಾವಾದ ಇನ್ನೂ‌ ಪೂರ್ತಿ ಬತ್ತಿಲ್ಲ ಎನ್ನುವದು ಇಲ್ಲಿರುವ ಜೀವ ಪರ ಅಂಶ.ಅದಕ್ಕೆ ಅವರು ತನ್ನ ಗೆಳತಿಗೆ ( ಮನದೊಡತಿಗೆ) ಬೆಳಗೋಣ ಬಾ ಬಾಳದೀಪ ” ಎಂದು ಕರೆ ಕೊಡುವಂತೆ ಸುತ್ತಲೂ “ಮತ್ತೆ ಚಿಗುರಲಿ ಮಾಮರ” ಎಂದು ಹಾರೈಸುತ್ರಾರೆ.

ಯುಗವು ಕ಼ಲೆಯಲಿ
ಯುಗಾದಿ ಬರಲಿ
ಮೋಡ ಮಳೆಯನು ಸುರಿಸಲಿ
ಮತ್ತೆ ಮಾಮರ ಚಿಗುರಲಿ

.ಎಂಬ ಹಾರೈಕೆ ನಿಜವಾಗಬೇಕಿದೆ.
ಅವ್ವನ ನೆನಪು ” ನನ್ನವ್ವ ” ಕವಿತೆಯಲ್ಲಿದೆ.

ಸಾಲಿ ಕಲಿಯದ ನನ್ನವ್ವ
ಸಾವಿರದ ಜನಪದ ಹಾಡು ಹಾಡುತ್ತ
ತಾನು ಕುರುಪಿಯಿಂದ ನೆಲ ಬರೆಯುತ್ತ
ನನ್ನ ಅಕ್ಷರ ಲೋಕಕ್ಕೆ ಪರಿಚಯಿಸಿದಳು

ಎನ್ನುವ ಸಾಲುಗಳು ಆ ತಲೆಮಾರಿನ ಎಲ್ಲ ದಲಿತರ, ನೊಂದವರ ಬದುಕಿನ ಚಿತ್ರಗಳೇ ಆಗಿವೆ.ಒಲವಿನ ಚಿತ್ರಗಳು ಇಲ್ಲಿವೆ’.ಮಾತು – ಮುತ್ತು’ ಕವಿತೆಯಲ್ಲಿ ಒಲವಿನ ಹಾಡು ಅರಳಿದೆ. ತ್ರಿಪದಿಗಳಲ್ಲಿ ಚಲುವಿನ ಚಿತ್ರಗಳನ್ನು ಬಿಡಿಸಿದ್ದಾರೆ.

ಡಾ.ಅರ್ಜುನ ಗೊಳಸಂಗಿ ಅವರು ಬರೆದ ಕವಿತೆಗಳೆಲ್ಲ ಶ್ರೇಷ್ಠ ಎಂಬ ಮಾತನ್ನು ಹೇಳಲು ನಾನು ಈ ಮೇಲಿನ ಸಾಲುಗಳನ್ನು ಬರೆದಿಲ್ಲ. ಅವರ ಕವಿತೆಗಳಲ್ಲಿ ಅವರೇ ಒಪ್ಪಿಕೊಂಡಂತೆ ಅವರ ಸಂಶೋಧಕ ಅಥವಾ ವಿಮರ್ಶಕನ ಮನೋಭಾವವೇ ಮುಂದಾಗಿ ಹೆಚ್ಚು ವಿವರಣೆ, ಜಾಳುಜಾಳಾದ ಬಂಧ ಇವೆಲ್ಲ ತೋರಿವೆ.ಆದರೆ ತನ್ನ ದಲಿತ ಲೋಕದ ನೋವನ್ನು ಅಭಿವಕ್ತಿಸಬೇಕೆಂಬ ಕಾಳಜಿ , ಅದರ ನಿರೂಪಣೆಯಲ್ಲಿನ ಪ್ರಾಮಾಣಿಕತೆ ಇವನ್ನು ನಾವು ಪರಿಗಣಿಸಿದಾಗ ಡಾ.ಗೊಳಸಂಗಿಯವರು ಮೂಕ ಲೋಕದ ಮಾತುಗಳನ್ನು ಆಡುವಲ್ಲಿ ಯಶಸ್ವಿಯಾಗಿದ್ದಾರೆ‌ ಎನಿಸುತ್ತದೆ. ನೋವಿನ‌ ಕಥೆಗಳು ಕಾವ್ಯದ ಯಾವ ಲಕ್ಷಣಗಳನ್ನು ನಿಯಮಿತವಾಗಿ ಅನುಸರಿಸುವದಕ್ಕೆ ಒಗ್ಗಲಾರವು .ಹಾಗಾಗಿ ಅದು ಸಹಜ ಕಾವ್ಯವೇ ಅಗಿರುತ್ತದೆ.

-ಡಾ.ಯಾಕೊಳ್ಳಿ.ಯ.ಮಾ
ಸವದತ್ತಿ

*****

 

ಡಾ.ಅರ್ಜುನ ಗೊಳಸಂಗಿ

*****