ಚೆಲುವಿನಮಲು
*****
ಆ ಆಳ ಕಂಗಳ
ಮಧುರ ನೋಟಕೆ
ಎಲ್ಲಿ ಮರುಳಾಗಿ
ಬಿಡುವೆನೇನೋ?
ಚೆಂದುಟಿಯೊಲವ
ನವಿರು ಗಾನಕೆ
ಎಲ್ಲಿ ಕೊರಳಾಗಿ
ಬಿಡುವೆನೇನೋ?
ಆ ಜೊಂಪು ಜೊಂಪು
ನೀಳ ಕೇಶರಾಶಿಗೆ
ಎಲ್ಲಿ ಹೂವಾಗಿ
ಬಿಡುವೆನೇನೋ?
ಸಂಪಿಗೆನಾಸಿಕದ
ಆ ರಮ್ಯ ಸೊಬಗಿಗೆ
ಎಲ್ಲಿ ಘಮವಾಗಿ
ಬಿಡುವೆನೇನೋ?
ಎದೆಯ ಕಡಲಲಿ
ಕುದಿವ ತೆರೆಗಳಿಗೆ
ಎಲ್ಲಿ ಬಲಿಯಾಗಿ
ಬಿಡುವೆನೇನೋ?
ನಿನ್ನೊಲವ ಹೂವು
ಅರಳದಿರೆ ಎಲ್ಲಿ
ನಾನೇ ‘ ಇಲ್ಲ ‘
ವಾಗುವೆನೇನೋ?
ಕಾಯಿಸದೆ ಬಾ
ಬೇಗ ಬೇಯಿಸಿಬಿಡು
ನಿನ್ನೆದೆ ಕೆಂಡದ
ಅಗ್ಗಿಷ್ಟಿಕೆಯಲಿ!
ಸಾಯಿಸದೆ ಸವಿಮಾತ
ಲೆನ್ನ ಮೀಯಿಸಿಬಿಡು
ನಿನ್ನೊಲವ ದಿವ್ಯ
ಶರಧಿಯಲಿ!
-ನೀ.ಶ್ರೀಶೈಲ ಹುಲ್ಲೂರು
ಚಿತ್ರ: ಸತೀಶ್ ಎಲೇಸರ