ಅನುದಿನ ಕವನ-೧೫೧ ಕವಿ: ಎ.ಎನ್ ರಮೇಶ್ ಗುಬ್ಬಿ ಕವನದ ಶೀರ್ಷಿಕೆ: ಮಹಂತ!

ನಿನ್ನೆ ಒಬ್ಬರು ಮೆಸೇಜ್ ಮಾಡಿ “ಮಹಂತ” ಅಂದರೆ ಯಾರು? ಕಾವ್ಯಾತ್ಮಕವಾಗಿ ಉತ್ತರಿಸಿ ಎಂದರು. ಆ ಉತ್ತರವೇ ಈ ಕವಿತೆ.                                  ನಿಘಂಟಿನಲ್ಲಿ ಮಹಂತ ಎಂದರೆ.. ಎಲ್ಲರ ಆದರಕ್ಕೆ ಪಾತ್ರನಾದವನು. ಪೂಜ್ಯ ಎಂಬ ಅರ್ಥವಿದೆ. ಆದ್ದರಿಂದ ನನ್ನ ಕಾವ್ಯರೂಪದ ಉತ್ತರ ಸರಿ ಇದೆ ಅಲ್ವಾ.? ಮಹಂತನಾಗಲು ನಿಸ್ಪೃಹ ಮನಸ್ಸು ಬೇಕು. ನಿಸ್ವಾರ್ಥ ತಪಸ್ಸು ಬೇಕು. ಏನಂತೀರಾ.?’
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ,👇

ಮಹಂತ!
ಇತರರ ಸಮಯಕೂ
ಬೆಲೆ ನೀಡುವವನಷ್ಟೇ
ಸಕಲರ ಹೃದಯದಿ
ಶಾಶ್ವತ ಸೆಲೆಯಾಗಬಲ್ಲ.!

ಬೇರೆಯವರ ನೋವಿಗೂ
ತಲೆ ಕೊಡುವವನಷ್ಟೇ
ಸರ್ವರ ಮನದಂಗಳದಿ
ನಿಶ್ಚಿತ ನೆಲೆಯಾಗಬಲ್ಲ.!

ಕಾಲವ ಕೇವಲವಾಗಿಸದೆ
ಯಾರನು ಕಡೆಗಣಿಸದೆ
ಬಾಳ್ವಕಲೆ ಅರಿತವನಷ್ಟೇ
ಸ್ಫೂರ್ತಿ ಅಲೆಯಾಗಬಲ್ಲ.!

-ಎ.ಎನ್.ರಮೇಶ್. ಗುಬ್ಬಿ.