ಕವಿ ಪರಿಚಯ:
ಟಿ.ಎನ್.ಶಿವಕುಮಾರ್. ಮೂಲತಃ ಮಂಡ್ಯ ಜಿಲ್ಲೆಯ ಮಂಡ್ಯಕೊಪ್ಪಲಿನವರು.
ಕನ್ನಡದಲ್ಲಿ ಎಂ ಎ ಪದವಿ ಗಳಿಸಿಕೊಂಡು ನಂತರ
ಹನ್ನೆರಡು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೆದಾರರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳಗನ್ನಡ, ವ್ಯಾಕರಣ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು,
ಹಳಗನ್ನಡ ಕಾವ್ಯಗಳ ವಾಚನ-ವ್ಯಾಖ್ಯಾನ, ಹೊಸ ತಲೆಮಾರಿಗೆ ಹಳಗನ್ನಡ ಸಾಹಿತ್ಯ ಪ್ರಸರಣ ಇವರ ಸಮಾಜಮುಖಿ ಪ್ರವೃತ್ತಿಗಳು. ಪುಟ್ಟ ವಾಕ್ಯಗಳಲ್ಲಿ ದಿಟ್ಟ ನುಡಿ ಶೀರ್ಷಿಕೆಯ ಅಡಿಯಲ್ಲಿ ಹೊಸಗನ್ನಡದಲ್ಲಿ ರಾಮಾಯಣ ರಚಿಸಿದ್ದಾರೆ, ಉತ್ತರಕಾಂಡದ ರಚನೆ ನಡೆದಿದೆ.
ಶಿವಕುಮಾರ ಮುಕ್ತಕಗಳು ಎಂಬ ಹೆಸರಿನಲ್ಲಿ ಸುಮಾರು ಒಂದು ಸಾವಿರ ಚೌಪದಿಗಳನ್ನು ರಚಿಸಿದ್ದಾರೆ. ಸೋಮೇಶ್ವರ ಶತಕಕ್ಕೆ ಅರ್ಥ ಮತ್ತು ವ್ಯಾಖ್ಯಾನ ಬರೆದಿದ್ದಾರೆ. ಹರಿಭಕ್ತಿಸಾರಕ್ಕೆ ವಿವರಣೆ ನೀಡಿದ್ದಾರೆ. ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗಕ್ಕೆ ವ್ಯಾಖ್ಯಾನ ಬರೆಯುತ್ತಿದ್ದಾರೆ. ಕವಿತಾ ರಚನೆ ಮತ್ತು ಉಪನ್ಯಾಸ ನೀಡುವ ಇವರು ತನಾಶಿ ಎಂಬ ಕಾವ್ಯನಾಮದಿಂದ ಪರಿಚಿತರಾಗಿದ್ದಾರೆ.
ಪ್ರಕಟಿತ ಕೃತಿಗಳು:
• ಸೋಮೇಶ್ವರ ಶತಕ.
• ಭಾಸ್ಕರನಿಗೆ ಅಕ್ಷರ ನಮನ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ತನಾಶಿ ಅವರ ‘ಮತ್ತೆ ಮಳೆ’ ಕವಿತೆ ಪಾತ್ರವಾಗಿದೆ.👇
*ಮತ್ತೆ ಮಳೆ*
ನೆಲದ ಕಾವಿಗೆ ಭಾನು ಕಾರಣವೆ ಆದಂತೆ
ನೆಲವ ತಣಿಸಲು ನೀರ ಆವಿ ಮಾಡಿದನೊ
ಜಲಧಿಯೊಳ ನೀರಂತೆ ತನ್ನ ಲವಣವ ಕಳೆದು
ಜಲಕಣದ ರೂಪದಲಿ ಬಾನ ಸೇರಿ.
ಅಂಬರದಿ ಮೇಘಗಳ ರೂಪವನು ತಾಳುತಿಹ
ಬಿಂಬವದು ಕಣ್ಣಿನಾ ಹಬ್ಬವಲ್ತೆ
ಸಿಂಬಿಗಟ್ಟುತ ತಾನು ವಾಯುವಿನ ವೇಗಕ್ಕೆ
ಇಂಬು ನೀಡುತ ದೂರ ಚಲಿಸುವಂತೆ.
ವಾಯುವುಯ್ಯಾಲೆಯಲಿ ಅಲೆಯುತ್ತ ಜಲದಗಳು
ಆಗಸದಿ ಶ್ಯಾಮಚಿತ್ರವನು ಬರೆದು
ಬೆಟ್ಟಗಳ ಘಟ್ಟದಲಿ ನಿಂದು ಢಿಕ್ಕಿಸಲಲ್ಲಿ
ಹುಟ್ಟಿತೋ ಮಳೆಯೆಂಬ ರೂಪ ತಾಳಿ
ಕಾರ್ಮೋಡಗಳು ನಿಂದು ಘನವಾಗಿ ಆವರಿಸಿ
ನೂರ್ಮಡಿಯ ಹನಿಗಳನು ಚೆಲ್ಲೆ ಭುವಿಗೆ
ಚಾರ್ಮಾಡಿ ಘಾಟಿರಲಿ ಬಯಲುಸೀಮೆಯೆ ಇರಲಿ
ಕಾರ್ಮಿಕನ ದುಡಿಮೆಯೊಲು ಧರೆ ತಲುಪಿದೆ.
ಹಳ್ಳಿ ಹಳ್ಳಿಗಳಲ್ಲಿ ಮಳೆಯ ವೈಭವ ನೋಡು
ಸಿಳ್ಳೆ ಹಾಕುವ ಮಂದಿ ಮಳೆಯ ಮಿಂದು
ಬಳ್ಳಿ ಮರಗಳು ನೀರ ಹಿಡಿದು ಕುಡಿಯುತಲಲ್ಲಿ
ಹಳ್ಳ ಹರಿದಿದೆ ನೋಡು ಹೊನಲಹಾಡು.
ನಗರದಲಿ ಮಾತ್ರವೇ ಮಳೆಯು ನಾಶಿನಿಯೆ.
ಹಗಲಿರುಳು ಮಾನವನ ದುರಾಸೆಯಲ್ಲಿ
ದಗದಿಂದ ಕಾಲುವೆಯನೊತ್ತರಿಸಿ ಮನೆಗಳನು
ಜಗಮಗಿಸಿ ಜನಕೆ ಅಪಕರಿಸುತಲ್ಲಿ.
ನೀರ ಇಂಗಲು ಬಿಡದೆ ಕಾಂಕ್ರೀಟು ಕಾಡುಗಳ
ಭಾರಿ ಲೆಕ್ಕದಲಿ ಕಟ್ಟಿದರೆ ನೋಡು
ಭೂರಿ ಮಳೆ ಬಂದಾಗ ನೀರಗಾಲುವೆಯಾಯ್ತು
ದಾರಿಯಿಲ್ಲದೆ ಜನಕೆ ನಡೆವ ಪಾಡು
ನಗರಕ್ಕೆ ಮಳೆ ಶಾಪ ಹಳ್ಳಿಗಲ್ಲವು ಎಂದು
ತಿಳಿವುದಿಲ್ಲವು ಏಕೆ ಮೂರ್ಖ ಮಂದಿ
ಸ್ವಾರ್ಥದಿಂದಲಿ ನಾವು ಸಹಕಾರ ನೀಡದಿರೆ
ಆಗುವೆವು ನಮ್ಮೊಳಗೆ ನಾವೆ ಬಂಧಿ.
-ತನಾಶಿ, ಮಂಡ್ಯಕೊಪ್ಪಲು
*****
ಹಮ್ಮು ಬಿಮ್ಮುಗಳಿಲ್ಲದ ಸರಳತೆಯ ಸಾಕಾರರೂಪದ ಜನಸಮೂಹದ ನಡುವೆ ಮಿತಭಾಷಿಯಾದ ವಿಷಯವಿಚಾರ ಕುರಿತು ವೇದಿಕೆ ಏರಿದರೆ ಪುಂಖಾನುಪುಂಖವಾಗಿ ಸಮಾಜಮುಖವಾದ ವಿಚಾರಗಳನ್ನು ಮಂಡಿಸುವ ತತ್ತ್ವಜ್ಞಾನಿ , ದಾರ್ಶನಿಕ ಕವಿ ತನಾಶಿಯಯೊಬ್ಬ ಉತ್ತಮಬರಹಗಾರ. ನಿರಂತರಬರಹಗಾರ. ಸನ್ನಡತೆಗಳ ಗೆಳೆಯ. ಬೋಧಕ, ಎಲೆಮರೆಯ ಕಾಯಂತೆ ಕಾಣಿಸಿಕೊಳ್ಳಬಯಸದನೀಡುವುದು ನನ್ನ ಧರ್ಮೆಂಬ ಜೀವನಾದರ್ಶದ ಆದರ್ಶಸಮಾಜಜೀವಿ. ತನಾಶಿಯ ಆಶೋತ್ತರಗಳು ಸಮಾಜದ ಒಳಿತಿಗಾಗಿ ಅಹರ್ನಿಶಿ ಬೆಳಗುತ್ತಿರಲಿ.ಅಭಿನಂದನೆಗಳು
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ಸರಳ ಸಜ್ಜನ ನಿಗರ್ವಿ ವಿದ್ವಾಂಸರು ಶ್ರೀ ತನಾಶಿ ಅವರು…ಇವರನ್ನು ಗುರುಗಳ್ಅಗಿ ಪಡೆದ ನಾವೇ ಧನ್ಯರು.ಅಭಿನಂದನೆಗಳು ಗುರುಗಳೇ