ಅನುದಿನ ಕವನ-೧೫೫. ಕವಿ: ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗು, ಕವನದ ಶೀರ್ಷಿಕೆ: ಈ ಬದುಕು ನಶ್ವರ…

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕೊಡಗಿನ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಮೂಲತಃ ಕವಿಗಳು, ರಂಗ ಕಲಾವಿದರು, ಗಾಯಕರು.
ಕೊಡುಗು ವಾರ್ತೆ ಕನ್ನಡ ವಾರಪತ್ರಿಕೆಯ ಸಂಪಾದಕರಾಗಿರುವ ಇವರು ಸಾಮಾಜಿಕ ಕಾಳಜಿವುಳ್ಳವರು. ಸಮ ಸಮಾಜದ ತುಡಿತವುಳ್ಳವರು. ಪತ್ರಿಕೆ ಮೂಲಕ ದನಿ ಇಲ್ಲದ ಶೋಷಿತರು, ಬಡವರು, ಅಸಂಘಟಿತ ಕಾರ್ಮಿಕರು, ಮಂಗಳಮುಖಿಯರ ದನಿಯಾದವರು.
ಪತ್ರಕರ್ತ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ ಎಂದು‌ ನಂಬಿರುವ ಪ್ರವೀಣ್ ಅವರು, ಸ್ವಾರ್ಥಕ್ಕಾಗಿ ಪತ್ರಿಕೋದ್ಯಮವನ್ನು ದುರಪಯೋಗಪಡಿಸಿಕೊಳ್ಳುವವರ ವಿರುದ್ಧ ಚಾಟಿ ಬೀಸಬಲ್ಲರು.
ಇವರ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ‌ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗೆ ಪಾತ್ರರಾದವರು.
ಜನಮುಖಿ ಪತ್ರಕರ್ತ, ಕವಿ ಪ್ರವೀಣ್ ಅವರ ‘ಈ ಬದುಕು ನಶ್ವರ’ ಕವಿತೆ ಇಂದಿನ “ಅನುದಿನ ಕವನ”. ಕ್ಕೆ ಪಾತ್ರವಾಗಿದೆ.👇

• ಈ ಬದುಕು ನಶ್ವರ…

ಇಂದು ನೋಡಿದವರು
ನಾಳೆಗೆ ಇಲ್ಲ,
ನಾಳೆ ನೋಡಿದವರು
ನಾಡಿದ್ದು ಇಲ್ಲ,
ಅಷ್ಟೇಕೆ ಈ ಕ್ಷಣದಲ್ಲಿ ಕಂಡವರು
ಮರುಕ್ಷಣದಲ್ಲಿ ಇಲ್ಲ.

ಮನುಷ್ಯನ ಜೀವನ ಇಷ್ಟೆ,
ಅದು ನೀರಿನ ಮೇಲಿನ ಗುಳ್ಳೆ.
ಇರುವ ತನಕ ನಾನೂ
ನನ್ನದು ಎಂಬ ಚಿಂತೆ,
ಉಸಿರು ನಿಂತ ಮರುಕ್ಷಣವೇ
ಮಸಣದಲ್ಲಿ ಸಂತೆ.

ಬದುಕಿರುವಾಗ
ಮುಖ ನೋಡದವರು,
ಸತ್ತಾಗ ಹೊದಿಕೆಯನ್ನು
ಸರಿಸಿ ನೋಡುತ್ತಾರೆ.
ಬದುಕಿದ್ದಾಗ
ತುತ್ತು ಹಾಕದವರು,
ಸತ್ತಾಗ ಬಾಯಿಗೆ
ನೀರು ಬಿಡುತ್ತಾರೆ.

ಮರೆತು ಬಿಡೋಣ ಈ ದ್ವೇಷವನ್ನು,
ಸಹಿಸಿಕೊಳ್ಳೋಣ ನಮ್ಮವರನ್ನು,
ಇಂದು ಕಂಡ ಮುಖಗಳು,
ನಾಳೆಗೆ ಕಾಣಸಿಗ(ಬಹು)ದು.
ಆ ಕಾಲನ ಕರೆ ಯಾವಾಗ
ಎಲ್ಲಿ ಹೇಗೆ ಎಂದು ಯಾರಿಗೆ ಗೊತ್ತು,
ಈ ಬದುಕು ನಶ್ವರ.

✍️ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡಗು
📲9880967573