ಇಂದು ವಿಶ್ವ ಪರಿಸರ ದಿನಾಚರಣೆ.ಈ ಹಿನ್ನಲೆಯಲ್ಲಿ ಹೂವಿನಹಡಗಲಿಯ ಕವಯತ್ರಿ ಶೋಭ ಮಲ್ಕಿ ಒಡೆಯರ್ ಅವರು ಪರಿಸರ ಜಾಗೃತಿ ಕವಿತೆ ರಚಿಸಿದ್ದಾರೆ. ಈ ಕವಿತೆ “ಒಳಿತು ಮಾಡು ಮನುಷ್ಯ…ನೀ ಇರೋದು ಮೂರು ದಿವಸ” ದಾಟಿಯಲ್ಲಿರುವುದನ್ನು ಗಮನಿಸಿದ ಹಗರಿಬೊಮ್ಮನಹಳ್ಳಿಯ ಪ್ರತಿಭಾನ್ವಿತ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಇವರು ಹಾಡಿದ್ದಾರೆ. ಕವಯತ್ರಿ ಮತ್ತು ಗಾಯಕಿ ಇಬ್ಬರು ಈ ವರ್ಷದ ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಅಭಿನಂದನಾರ್ಹರು. ಬಳಿಕ ಸಿಕ್ಕ ಮಾಹಿತಿಯಂತೆ ಹೂವಿನ ಹಡಗಲಿಯ ಜನಪ್ರಿಯ ಗಾಯಕರೂ ಆಗಿರುವ ಮುಖ್ಯಗುರು ಪ್ರಕಾಶ್ ಜೈನ್ ಅವರು ಈ ಕವಿತೆಯನ್ನು ಹಾಡಿದ್ದಾರೆ. ಇವರ ಪರಿಸರ ಪ್ರೇಮವನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಅಭಿನಂದಿಸುತ್ತದೆ. ಒಳಿತು ಮಾಡು ಮನುಷ್ಯ ಗೀತೆಗೆ ರಾಗ ಸಂಯೋಜನೆ ಮಾಡಿದ ಪ್ರಖ್ಯಾತ ಸಂಗೀತ ನಿರ್ದೇಶಕ ಸಿ.ಅಶ್ವತ್ಥ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇ ಬೇಕು.
ಇಂದಿನ ‘ಅನುದಿನ ಕವನ’ಕ್ಕೆ ಶೋಭ ಮಲ್ಕಿ ಒಡೆಯರ್ ಅವರ ‘ಕಡಿಯಬ್ಯಾಡೊ ಮನುಷ್ಯ
ನಾನಿರುವೆ ನೂರು ವರುಷ’ ಕವನ(ಗೀತೆ) ಪಾತ್ರವಾಗಿದೆ.
(ಸಂಪಾದಕರು)👇
“ಕಡಿಯಬ್ಯಾಡೊ ಮನುಷ್ಯ
ನಾನಿರುವೆ ನೂರು ವರುಷ”
[ಪರಿಸರ ಜಾಗೃತಿ ಕವನ ( ಗೀತೆ)]
*****
ಕಡಿಯಬ್ಯಾಡೊ ಮನುಷ್ಯ
ನಾನಿರುವೆ ನೂರು ವರುಷ
ಕಡಿದು ಕೆಡವಿದಮ್ಯಾಲೆ ನನ್ನ ನೆರಳು ಸಿಗುವುದೇನೊ
ಒಣಗಿ ಹೋಗ್ತಿನಲ್ಲೊ, ಕೊರಡು ಆಗ್ತಿನಲ್ಲೊ
ಮಾರಾಟ ಮಾಡುತಾರ
ನನ್ನ ಸುಟ್ಟು ಹಾಕತಾರ !! ಕಡಿಯಬ್ಯಾಡೊ !!
ಪರಿಸರೆಂಬುದಿಲ್ಲಿ ದಿನ – ದಿನವು ನಾಶವಾಯ್ತು
ಉಸಿರಾಡದೇ ಮನುಜ ಪರಿತಪಿಸುವಂತಾಯ್ತು
ಹಸಿರು ಎಂಬುದಿಲ್ಲೀ ಕಣ್ಣಿಂದಲೆ ಮರೆಯಾಯ್ತು
ಕಟ್ಟಡಗಳು ಏರಿ ಗಗನ ತಲುಪಿಹೋಯ್ತು
ಇಂದಿನ ಮನು ಕುಲವು ಚಿಂತಿಸಲೇಬೇಕು
ಮುಂದಿನ ಪೀಳಿಗೆಗೆ ಉಳಿಸಿ ಹೋಗಬೇಕು
ಬರಡು ಭೂಮಿ ಮಾಡಿ
ಹೋಗಬ್ಯಾಡ ನೀನು !! ಕಡಿಯಬ್ಯಾಡೊ !!
ನಿನ್ನ ಹಾಗೆ ನಮಗೇ ಜೀವ ಉಂಟು ಕೇಳು ಮನುಜ
ಜೀವ ತೆಗಿಯಬ್ಯಾಡ ನೋವುಂಟು ದಿನವೂ ನಿಜ
ಅತಿಯಾಸೆ ನಿನಗೇ ಗತಿಗೇಡಿ ಆಗಬ್ಯಾಡ
ದುಡುಕಿ ಕಡಿದು ಹಾಕಿ ಮತ್ತೆ ಮರುಗಬ್ಯಾಡ
ನಿನ್ನ ವಂಶದಂತೆ ನಾವು ಉಳಿಯಬೇಕು
ಆತುರ ಪಡದಂತೆ ನನ್ನತ್ತ ತಿರುಗಿ ನೋಡು
ಆಸೆಯು ಅತಿಯಾದರೆ
ನಾಶವೇ ಈ ಜಗವು !! ಕಡಿಯಬ್ಯಾಡೊ !!
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
🖕ಶೋಭ ಮಲ್ಕಿ ಒಡೆಯರ್
👆ಪದ್ಮಶ್ರೀ ಸಾಲುಮರದ ತಿಮ್ಮಕ್ಕ
👆ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ