ಅನುದಿನ ಕವನ:೧೫೭ ಕವಿ: ಜೀವಿ(ಡಾ.ಗೋವಿಂದ) ಕವನದ ಶೀರ್ಷಿಕೆ: ಇಳೆಗಿಳಿದಾ ಮಳೆ|

ಕವಿ ಪರಿಚಯ:
ಅವಿಭಜಿತ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಡಾ.ಗೋವಿಂದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು. ಪ್ರಸ್ತುತ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರು. ಪತ್ರಿಕೋದ್ಯಮ ವಿಭಾಗದ ಆಂತರಿಕ ವಿಷಯತಙ್ಞರು, ‘ಬಳ್ಳಾರಿ ಜಿಲ್ಲಾ ಜನಪದ ದೈವಗಳು’ಎಂಬ ವಿಷಯದ ಕುರಿತಾಗಿ ಪಿಎಚ್.ಡಿ ಪಡೆದಿದ್ದಾರೆ.
ಜಾನಪದ ಸಮಾಗಮ, ಅವಲೋಕನ, ಜಾನಪದ ಚಿಂತನ- ಚಿಂತಕರು,ಸಿಂಚನ ಎಂಬ ನಾಲ್ಕು ಸಂಶೋಧನ ಕೃತಿಗಳು ಪ್ರಕಟ.ಅಲ್ಲದೇ 450 ಕ್ಕೂ ಹೆಚ್ಚು ಕವನ ರಚನೆ ಹಾಗೂ ಹಲವು ಕಥೆಗಳನ್ನು(ಅಪ್ರಕಟಿತ)ಬರೆದಿದ್ದಾರೆ.
ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟವಾಗಿವೆ.
ಒಂದೂವರೆ ದಶಕಗಳ ಕಾಲ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸಿರುವ ಡಾ. ಗೋವಿಂದ ಅವರು ತಮ್ಮ ಹಲವು ಕವಿತೆಗಳನ್ನು ಜೀವಿ ಕಾವ್ಯನಾಮದಲ್ಲಿ ರಚಿಸಿ ಗಮನ ಸೆಳೆದಿದ್ದಾರೆ.
ಡಾ. ಗೋವಿಂದ ಅವರ ಇಳೆಗಿಳಿದಾ ಮಳೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇
*****

ಇಳೆಗಿಳಿದಾ ಮಳೆ

ಮೋಡದ ಮನೇಲಿ ಹನಿಗಳ ಬಳಗ|
ನೋಡು ನೋಡುತಲಿ ಸೇರಿದವಾಗ|
ಬಿಡಿಸಲಾಗದ ಬಂದ ಆತು ಆವಾಗ|
ತಡಿಯದಲೇ ತಬ್ಬಿಕೊಂಡವು ಬೇಗ||

ಬಾಚಿ ಅಪ್ಪಿದಾಕ್ಷಣಾ ಭಾನು ನಡಕ|
ದಡ್ ದಡಾರೆಂಬ ಗುಡುಗಿನ ಎರಕ|
ಆ ಕೂಡಲೇ ಎಲ್ಲರಲೂ ಮೈನಡಕ|
ಪಕ್ಷಿ ಪ್ರಾಣಿ ಸೇರಿದವು ಮನಿಯಾಕ||

ಆಗಸದಲಾಗ ಬೆಳಕಿನ ಕಾರುಬಾರ|
ಬುವಿಗೆ ತೋರೆ ಮಿಂಚಿನ ಸಂಚಾರ|
ಮೊಳಗಿತಾಗಲೇ ಸಿಡಿಲಿನಾ ಅಬ್ಬರ|
ಜಳಜಳನೆ ಉದುರಿತು ವರ್ಷಧಾರ||

ಮಳೆ ಇಳೆಯ ತನುಗಳಾ ಸಂಗಮ|
ತಳೆದು ತೋರಿತಾಗ ಭಾವಸಂಗಮ|
ಎಳೆದು ಕೊಂಡಿತಾಗಲೆ ವಿಹಂಗಮ|
ಸೆಳೆಯಿತಾಗಾ ತಂಪಿನಾ ಗಮಗಮ||

ಕಿಟಕಿಯಾ ತೆರೆದು ಜೀವನ ನೋಡೆ|
ಫಟಫಟ ಹನಿಗಳೇ ಮೋಡಿ ಮಾಡೆ|
ಆಟವಾಡಲು ಮನವೂ ಕುಣಿದಾಡೆ|
ಹಟಮಾಡಿತಾಗಲೇನೇ ಅವನ ನಡೆ||

ಸಂಗಮಕಾಗೀ ಹಾತೊರೆದ ಚಿಣ್ಣರು|
ಚಂಗನೆ ಜಿಗಿದು ಓಡುತಲಿ ಬಂದರು|
ಅಂಗಳದ ನಿಂತ ನೀರಲಿ ಕುಣಿದರು|
ಸಂಗಮಿಸೀ ಮರಳ ಮನೆ ಕಟ್ಟಿದರು||

ಮಳೇಲಿ ಆಡಲು ಅಪ್ಪನ ಛಡಿಏಟು|
ಅಮ್ಮ ಕರೆದು ನೀಡಲು ಚಾಕಲೇಟು|
ತಮ್ಮನು ನೀಡಿದನಾಗಲೆ ಕರದಂಟು|
ಸುಮ್ಮನೆ ಮಲಗಿಸಿದ ಅಮ್ಮ ಲೇಟು||

ಅಡಿಗಡಿಗೆ ನನ್ನ ಉಪಚರಿಸಿದಳಮ್ಮ|
ನಡಿಗೆಯಲೂ ಎಚ್ಚರವಹಿಸಿದಳಮ್ಮ|
ಬಡಿಗೆಯ ಮಾತಲಿ ಪಾಲಿಸಿದಳಮ್ಮ|
ಕಡಿಮೆ ಮಾಡದೇ ನೀಡಿದಳಮ್ಮಮ್ಮ||

-ಜೀವಿ
ಡಾ.ಗೋವಿಂದ
ಕನ್ನಡ ವಿಶ್ವವಿದ್ಯಾಲಯ.ಹಂಪಿ