ತೈಲ ಬೆಲೆ ಏರಿಕೆ ಕೇವಲ ಬೈಕ್, ಕಾರಿನವರಿಗಷ್ಟೇ ಸಂಬಂಧಿಸಿದ್ದಾ ? -ಹಿರಿಯ ಸಾಹಿತಿ ಸಿದ್ಧರಾಮ‌ಕೂಡ್ಲಿಗಿ

ತೈಲದ ಬೆಲೆ ಏರಿಕೆಯೆಂದರೆ ನಮ್ಮ ಜನ ಅರ್ಥೈಸುವುದು ” ಅದು ಎಫೆಕ್ಟ್ ಆಗೋದು ಬೈಕ್, ಕಾರ್ ಇದ್ದೋರಿಗೆ ಬಿಡ್ರಿ. ಅವರಿಗೇನು ಕಡಿಮೆ ? ಬೇಕಾದಷ್ಟು ದುಡ್ಡ ಇರ್ತದೆ, ನಾವು ಬಡವರು ನಮಗೇನು ಎಫೆಕ್ಟ್ ಆಗಲ್ಲ ” ಅನ್ನೋ ಮನೋಭಾವವಿದೆ. ಅಲ್ಲದೆ ಏರಿಕೆಯನ್ನು ಬೆಂಬಲಿಸುವವರೂ ಸಹ, ” ಹೋಗಲಿ ಬಿಡ್ರಿ ವಾಹನಗಳನ್ನಿಟ್ಟುಕೊಂಡವನಿಗಲ್ವಾ ಹೊಡ್ತ, ಬಸ್ ನಲ್ಲಿ ಅಡ್ಡಾಡೋ ನಮಗೇನು ? ” ಎಂಬ ಉಡಾಫೆ ಮಾತುಗಳೂ ಬರ್ತವೆ.

ದುರಂತವೇನೆಂದರೆ ಈ ಮೀಡಿಯಾಗಳು ಬಿಂಬಿಸುವುದೂ ಸಹ ಹಾಗೇ, ಅಂದರೆ ಈ ತೈಲ ಬೆಲೆ ಏರಿಕೆ ಕೇವಲ ” ಉಳ್ಳವರಿಗೆ ” ಅಷ್ಟೆ ಎಂಬಂತೆ. ಕೇವಲ ಬೈಕ್ ಚಾಲಕರನ್ನು, ಕಾರ್ ಮಾಲೀಕರನ್ನು ಮಾತ್ರ ಮಾತನಾಡಿಸಿ, ಅವರಿಗಷ್ಟೇ ಸಮಸ್ಯೆ ಎಂಬಂತೆ ತೋರಿಸಲಾಗುತ್ತದೆ. ಆದರೆ ತೈಲ ಬೆಲೆ ಏರಿಕೆಯ ಹಿಂದೆ ಕಂಡೂ ಕಾಣದಂತೆ ಹೊಡೆತ ಬೀಳುವುದು ಜನಸಾಮಾನ್ಯರಿಗೂ, ಬಡವರಿಗೂ ಸಹ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳೋದಿಲ್ಲ ಅಥವಾ ಜಾಣ ಕುರುಡು.

ತೈಲ ಬೆಲೆ ಏರಿದೊಡನೆಯೇ ದಿನನಿತ್ಯದ ಸರಕು ಸಾಗಣೆಯ ವೆಚ್ಚ ಏರುತ್ತದೆ. ಅದರ ವೆಚ್ಚವನ್ನು ಉತ್ಪಾದಕರು ಮತ್ತೆ ಹೇರುವುದು ದಿನಸಿ ವಸ್ತುಗಳ ಮೇಲೆ ಬೆಲೆ ಏರಿಕೆಯಿಂದಲೇ. ಗ್ರಾಹಕನೇ ಇಲ್ಲಿ ಕೊನೆಯ ಕೊಂಡಿ. ಈ ಗ್ರಾಹಕರಲ್ಲಿ ಶ್ರೀಮಂತ, ಬಡವ ಎಂಬ ಭೇದವಿದೆಯೇ ಇಲ್ಲ. ಎಲ್ಲರಿಗೂ ಒಂದೇ ದರ ಅಲ್ಲವೇ ? ಅಂದರೆ ನೇರ ಹೊಡೆತ ಬೀಳುವುದೇ ಬಡವರಿಗೆ.

” ನಮಗೇನ್ರಿ ಬಸ್ ನಲ್ಲಿ ಓಡಾಡ್ತೀವಿ ” ಅನ್ನುವ ಜನಸಾಮಾನ್ಯರಿಗೂ ಹೊಡೆತವೇ. ಯಾಕೆಂದರೆ ಅನಿವಾರ್ಯವಾಗಿ ಬಸ್ ಗಳ ಪ್ರಯಾಣ ದರವನ್ನು ಏರಿಕೆ ಮಾಡಲೇಬೇಕಾಗುತ್ತದೆ. ಇದರಲ್ಲಿ ಬಹುತೇಕವಾಗಿ ಪ್ರಯಾಣ ಮಾಡುವವರು ಶ್ರೀಸಾಮಾನ್ಯರೇ. ಅಂದರೆ ಬಡವರು. ಮತ್ತೆ ಹೊಡೆತ ಬೀಳುವುದೇ ಬಡವರಿಗೆ.

” ಪೆಟ್ರೊಲ್ ದರ ಹೆಚ್ಚಾದರೆ ಬೈಕ್ ಇಟ್ಟುಕೊಂಡವರಿಗೆ ನಮಗೇನೂ ಸಂಬಂಧವಿಲ್ಲ ” ಎನ್ನುವಂತೆಯೂ ಇಲ್ಲ. ಉತ್ಪಾದಕರು ಕೇವಲ ಸಾಗಣೆ ವೆಚ್ಚವನ್ನಷ್ಟೇ ಗ್ರಾಹಕನ ಮೇಲೆ ಹೇರುವುದಿಲ್ಲ, ಎಲ್ಲೆಡೆಯೂ ಇರುವ ತಮ್ಮ ಉತ್ಪನ್ನಗಳನ್ನು ಪ್ರಚುರಪಡಿಸಲು, ಮಾರಾಟ ಮಾಡಲು ನೇಮಿಸುವ ಏಜೆಂಟರುಗಳಿಗೆ ಹಣ ಕೊಡಬೇಕಾಗುತ್ತೆ. ಬಹುತೇಕ ಏಜೆಂಟರುಗಳೆಲ್ಲ ಬೈಕ್ ಮೇಲೆ ಓಡಾಡ್ತಾರೆ. ಅಲ್ಲಿ ಪೆಟ್ರೋಲ್ ನ ವೆಚ್ಚವನ್ನು ಉತ್ಪನ್ನಗಳ ಮೇಲೆ ಹೇರಲೇಬೇಕಾಗುತ್ತೆ. ಪಟ್ಟಣದಿಂದ ಕುಗ್ರಾಮಗಳಿಗೆ ತಂದು ಮಾರಾಟ ಮಾಡುವ ಗೂಡಂಗಡಿಯವನೂ ಬೈಕ್ ಬಳಸುತ್ತಾನೆ. ಅದರ ವೆಚ್ಚವನ್ನು ಅವನು ತನ್ನ ಲಾಭದೊಂದಿಗೆ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ. ಮತ್ತೆ ಹೊಡೆತ ಬೀಳುವುದು ಬಡವರಿಗೆ.

ಇವೆಲ್ಲ ನಮಗರಿವಿಲ್ಲದಂತೆಯೇ ಹಿನ್ನೆಲೆಯಲ್ಲಿ ನಡೆಯುವ ಕೋಟ್ಯಂತರ ರೂ.ಗಳ ವ್ಯವಹಾರ. ಇದನ್ನು ಮತ್ತೆ ತಲೆ ಮೇಲೆ ಹೇರುವುದು ಗ್ರಾಹಕರ ಮೇಲೆಯೇ ಅಂದರೆ ಬಡವರ ಮೇಲೆಯೇ.

ಕಾರಣ ತೈಲ ಬೆಲೆ ಏರಿಕೆಯೆಂದರೆ ಟಿವಿ ಚಾನಲ್ ಗಳಲ್ಲಿ ತೋರಿಸುವಂತೆ ” ಕೇವಲ ಬೈಕ್, ಕಾರಿಟ್ಟುಕೊಂಡವರಿಗಷ್ಟೇ ಸಂಬಂಧಿಸಿದ್ದು ನಮಗಲ್ಲ ” ಎಂದು ಖಂಡಿತ ಅಂದುಕೊಳ್ಳಬೇಡಿ. ಇದು ಜನಸಾಮಾನ್ಯರು, ಕಡುಬಡವರಿಗೂ ಸಹ ಅನ್ವಯಿಸುತ್ತದೆ.

-ಸಿದ್ಧರಾಮ ಕೂಡ್ಲಿಗಿ
ಸಾಹಿತಿ, ಹವ್ಯಾಸಿ ಪತ್ರಕರ್ತರು, ಕೂಡ್ಲಿಗಿ