ಅನುದಿನ ಕವನ-೧೬೧ ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಭಯಭೀತ ದಿಗ್ಭ್ರಾಂತಿ..!

“ಇದು ಪ್ರಸಕ್ತ ವರ್ತಮಾನದ ಕವಿತೆ. ಪ್ರಸ್ತುತ ವಿದ್ಯಮಾನಗಳ ಭೀತಗೀತೆ. ಗತಿ, ಶೃತಿ ಬದಲಾದ ಬದುಕುಗಳ ದುರಂತ ಭಾವಗೀತೆ. ಅದೃಶ್ಯರೂಪಿ ಸೂಕ್ಷ್ಮಾಣು ಒಂದು ಒಮ್ಮಿಂದೊಮ್ಮೆಗೇ ಇಡೀ ಜಗತ್ತನ್ನೇ ಕೋಲಾಹಲಗೊಳಿಸಬಹುದೆಂದು, ಜೀವ-ಜೀವನಗಳನ್ನೇ ಅಲ್ಲೋಲ ಕಲ್ಲೋಲಗೊಳಿಸಬಹುದೆಂದು, ಯಾರ್‍ಯಾರೂ ಊಹಿಸಿರಲಿಲ್ಲ. ಇಷ್ಟೆಲ್ಲ ವಿಕ್ಷಿಪ್ತ, ವಿಚ್ಛಿನ್ನ, ವಿಭ್ರಾಂತ ಸಂಗತಿಗಳಿಗೆ ನಮ್ಮ ಜೀವಿತಗಳು ಸಾಕ್ಷಿಯಾಗಬಹುದೆಂದು ನಾವ್ಯಾರೂ ಕನಸು ಮನಸಿನಲ್ಲೂ ಕಲ್ಪಿಸಿರಲಿಲ್ಲ. ಏನಂತೀರಾ..?” – ವಿಷಾದದಿಂದ ಎ.ಎನ್.ರಮೇಶ್. ಗುಬ್ಬಿ.

ಭಯಭೀತ ದಿಗ್ಭ್ರಾಂತಿ..!

ಅಕ್ಷರಶಃ ನಾವ್ಯಾರು ಎಂದು ಎಣಿಸಿರಲಿಲ್ಲ..
ಬಹುಶಃ ಕನಸಿನಲ್ಲು ಕೂಡ ಕಲ್ಪಿಸಿರಲಿಲ್ಲ..

ಮುಖಮುಚ್ಚಿ ಓಡಾಡಬೇಕಾಗುವುದೆಂದು
ಯಾರನ್ನು ಮುಟ್ಟಲೂ ಭಯಬೀಳುವೆವೆಂದು
ಎಲ್ಲರಿಂದ ಅಂತರ ಕಾಯ್ದುಕೊಳ್ಳುವೆವೆಂದು
ಅಂಜಿಕೆ ಆತಂಕವೇ ಬದುಕಾಗುವುದೆಂದು.!

ತಿಂಗಳುಗಟ್ಟಲೆ ಬದುಕು ಸ್ತಬ್ದವಾಗುತ್ತೆಂದು
ಹೀಗೆಲ್ಲಾ ಗೃಹಬಂಧಿಗಳಾಗುತ್ತೇವೆಂದು.!
ಜನರಿಂದಲೇ ದೂರವಾಗಿರುತ್ತೇವೆಂದು
ಬಂಧಗಳಿಲ್ಲದೇ ಭಯದಿ ಬಾಳುತ್ತೇವೆಂದು.!

ಶಾಲೆಯೇ ಮನೆಗೆ ಆಗಮಿಸಬಹುದೆಂದು
ಗುರು ಗುರಿಗಳಿಲ್ಲದೆ ಬದುಕಬಹುದೆಂದು
ಆಟ ಪಾಠವಿಲ್ಲದೆ ದಿನಗಳ ಕಳೆಯುವೆವೆಂದು
ಪರೀಕ್ಷೆಗಳ ಬರೆಯದೇ ಪಾಸಾಗುವೆವೆಂದು.!

ಕೆಲವರಿಗೆ ಮನೆಯೇ ಕಛೇರಿಯಾಗುತ್ತೆಂದು
ಹಲವರಿಗೆ ದುಡಿವಕೈಗೆ ಬೀಗ ಬೀಳುತ್ತೆಂದು
ನಗರ ಬೀದಿಗಳು ನಿರ್ಮಾನುಶ್ಯವಾಗುತ್ತೆಂದು
ದೇಶ ದೇಶವೇ ದಿನಗಳ ಎಣಿಸಬಹುದೆಂದು.!

ಹೀಗೊಂದು ರೋಗವದು ಬರಬಹುದೆಂದು
ದಿನಕ್ಕೆ ಸಾವಿರಾರು ಜನ ಸಾಯುವರೆಂದು.!
ಸಾವೆಂಬುದು ಇಷ್ಟು ಕೇವಲವಾಗುತ್ತೆಂದು
ಉಸಿರಗಾಳಿಗೂ ಸಂಚಕಾರ ಬರುತ್ತದೆಂದು.!

ಭರವಸೆ ನಂಬಿಕೆಗಳೇ ನಾಶವಾಗುವುದೆಂದು
ಖಾಲಿಹೊಟ್ಟೆಗೆ ಕಂಬನಿ ಗತಿಯಾಗುವುದೆಂದು
ಜೀವ-ಜೀವನಗಳ ಆಯ್ಕೆ ಬರುವುದೆಂದು
ಬದುಕು ಇಷ್ಟೆಲ್ಲಾ ಅತಂತ್ರವಾಗುವುದೆಂದು.!

ನಿತ್ಯವೂ ಸತ್ತವರ ಲೆಕ್ಕವಿಟ್ಟು ಕೂರುತ್ತೇವೆಂದು
ಹೀಗೆ ಅನಾಥರಾಗಿ ಮಸಣ ಸೇರುತ್ತೇವೆಂದು.!
ಕನಿಷ್ಟ ಸಂಸ್ಕಾರಲ್ಲವಿದೆ ಚಿತೆಯೇರುತ್ತೇವೆಂದು
ಶವ ಪೊಟ್ಟಣ ಕಟ್ಟೆಸೆವ ಕಾಲಬರುವುದೆಂದು.!

ಅಕ್ಷರಶಃ ನಾವ್ಯಾರು ಇದನು ನೆನೆಸಿರಲಿಲ್ಲ..
ಬಹುಶಃ ಕನಸಿನಲ್ಲು ಈದಿನ ಕಲ್ಪಿಸಿರಲಿಲ್ಲ..

-ಎ.ಎನ್.ರಮೇಶ್ ಗುಬ್ಬಿ.
*****