ಬಳ್ಳಾರಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳಮುಖಿಯರಿಗೆ ಕೋವಿಡ್ ಲಸಿಕೆಗೆ ಚಾಲನೆ

ಬಳ್ಳಾರಿ: ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ಮಂಗಳಮುಖಿಯರು ಹಾಗೂ ಸವಿತಾ ಸಮಾಜದವರಿಗೆ ಗುರುವಾರ ಮತ್ತು ಶುಕ್ರವಾರ ಎರಡು ದಿನ ಲಸಿಕೆ ನೀಡಲಾಗುತ್ತದೆ. ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ 500 ಜನ ಮಂಗಳಮುಖಿಯರಿದ್ದು, ನಗರ ವ್ಯಾಪ್ತಿಯಲ್ಲಿರುವ 300 ಮಂಗಳಮುಖಿಯರಿಗೆ ಹಾಗೂ ನಗರ ವ್ಯಾಪ್ತಿಯಲ್ಲಿರುವ ಸವಿತಾ ಸಮಾಜದ 1ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯಿದೆ ಎಂದು ಹೇಳಿದರು.
ಎಲ್ಲ ಸಾರ್ವಜನಿಕರು ಭಯ ಬಿಟ್ಟು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ. ಕೊರಾನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಅವರು ಮಾತನಾಡಿ ಎರಡು ದಿನವೂ ತಾಲೂಕು ಕಚೇರಿ ಆವರಣದಲ್ಲಿ ಲಸಿಕಾ ನೀಡಲಾಗುತ್ತದೆ. ಎಂದರು.
ಲಸಿಕೆ ಪಡೆದ ಮಂಗಳಮುಖಿಯರಾದ ಚಾಂದಿನಿ, ಸಂಧ್ಯಾ, ಗೌಸಿಯಾಭಾನು ಅವರು ಪ್ರತಿಕ್ರಿಯಿಸಿ ಎಲ್ಲಾ ಸಾರ್ವಜನಿಕರು ಲಸಿಕೆಯನ್ನು ಪಡೆಯಿರಿ. ಯಾರೂ ಭಯಪಡಬೇಡಿ, ಇದರಿಂದ ಏನೂ ತೊಂದರೆಯಾಗುವುದಿಲ್ಲ. ಲಸಿಕೆ ಪಡೆದು ಕೊರೊನಾ ವಿರುದ್ದ ಹೋರಾಡೋಣ ಎಂದರು.
ತಮಗೆಲ್ಲರಿಗೂ ಲಸಿಕೆ ಪಡೆಯಲು ಸಹಕರಿಸಿದ ತಹಸೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಮಂಗಳಮುಖಿಯರು ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ತಾಪಂ ಸಿಬ್ಬಂದಿ ಮತ್ತು ಇತರರು ಇದ್ದರು.
*****