ಕವಯಿತ್ರಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರ ಪರಿಚಯ👇
ಕವಯಿತ್ರಿ ಶ್ರೀಮತಿ ನಿಂಗಮ್ಮ ಅಶೋಕ ಭಾವಿಕಟ್ಟಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ತುಂಬು ಕುಟುಂಬದ ಗೃಹಿಣಿಯಾಗಿದ್ದುಕೊಂಡು ತಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ಹಾಗೂ ಸುತ್ತಲಿನ ಪರಿಸರ ಮತ್ತು ಪರಿಸ್ಥಿತಿಗಳಿಗೆ ಅಕ್ಷರ ರೂಪ ಕೊಟ್ಟು ಕವನ ರಚಿಸುವುದೆಂದರೆ ಇವರಿಗೆ ಅಚ್ಚುಮೆಚ್ಚು. . ಉದಯೋನ್ಮುಖ ಕವಯಿತ್ರಿಯಾಗಿ ಅನೇಕ ಕವನಗಳನ್ನು ರಚಿಸಿದ್ದು ಅವುಗಳ ಗುಚ್ಚವಾಗಿ ಎರಡು ಕವನ ಸಂಕಲನಗಳು ʼಕುಶಲೋಪರಿʼ ಹಾಗೂ ʼಹಾರೈಕೆʼ ಹೆಸರಿನಲ್ಲಿ ಲೋಕಾರ್ಪಣೆಗೊಂಡಿರುವುದು ಗಮನಾರ್ಹ.
ತಮ್ಮ ಅನುಭವ ಮತ್ತು ಅನುಭಾವದ ಪರಿಣಾಮವಾಗಿ ‘ಗುರುದೇವ’ ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳನ್ನು ರಚಸಿದ್ದು ʼವಚನ ಸಂಭ್ರಮʼ ಎಂಬ ಆಧುನಿಕ ವಚನಗಳ ಸಂಗ್ರಹವನ್ನು ವಚನ ಪ್ರಿಯರ ಮಡಿಲಿಗೆ ಹಾಕಿದ್ದಾರೆ.
ನಿಂಗಮ್ಮ ಬಾವಿಕಟ್ಟಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಮಂಡ್ಯದ ಕನ್ನಂಬಾಡಿ ಪ್ರತಿಷ್ಠಾನ ಪ್ರತಿಷ್ಠಿತ ʼಕಾವ್ಯಶ್ರೀʼ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.
ಅಲ್ಲದೆ ಹಾರೂಗೇರಿಯ ಆಜೂರ ಪ್ರತಿಷ್ಠಾನ ಇವರ ʼವಚನ ಸಂಭ್ರಮʼ ಆಧುನಿಕ ವಚನಗಳ ಸಂಕಲನವನ್ನು 2018 ರಲ್ಲಿ ಅತ್ಯುತ್ತಮ ಕೃತಿ ಎಂದು ಪರಿಗಣಿಸಿ ಪುಸ್ತಕ ಪ್ರಶಸ್ತಿ ನೀಡಿ ಸತ್ಕರಿಸಿದೆ.
ನಿಂಗಮ್ಮ ಬಾವಿಕಟ್ಟಿ ಅವರಿಂದ ಇನ್ನಷ್ಟು ಸಾಹಿತ್ಯ ಕೃತಿಗಳು ಕನ್ನಡಾಂಬೆಯ ಮುಡಿಗೇರಲಿ ಎಂಬ ಆಶಯ ಕರ್ನಾಟಕ ಕಹಳೆ ಡಾಟ್ ಕಾಮ್ ನದು….
ಇಂದಿನ ಅನುದಿನ ಕವನದ ಗೌರವಕ್ಕೆ ನಿಂಗಮ್ಮ ಅಶೋಕ ಬಾವಿಕಟ್ಟಿ ಅವರ ಕುಶಲೋಪರಿ ಕವಿತೆ ಪಾತ್ರವಾಗಿದೆ….👇
ಕುಶಲೋಪರಿ
ಚಳಿಗಾಲದ ಎಳೆ ಬಿಸಿಲಿಗೆ
ಎಲ್ಲಿಲ್ಲದ ಬೇಡಿಕೆ
ಅರೆ ಬಿರಿದಿದೆ ಹೊಸ ಹೂವು
ಅದಕೆಂಥದೋ ನಾಚಿಕೆ
ಹರಿದಾಡಿವೆ ಇಬ್ಬನಿಯು
ಖುಷಿಯಾಗಿದೆ ಅವಕೆ
ಮರಿ ದುಂಬಿಯ ತುಂಟಾಟಕೆ
ಜೇನಾಟದ ಸರಸಕೆ
ಪಿಸುಗುಟ್ಟಿದೆ ಪ್ರಕೃತಿಯು
ತಮ್ ತಮಗೆ ತಟ್ಟುವ
ರವಿಗಾನದ ಮಾಧುರ್ಯಕೆ
ತಮ್ ತಾಳವ ಹಾಕುತ
ಮಾತಾಗಿದೆ ಮೌನಗಳು
ಮೌನಾಗಿವೆ ಮಾತು
ನೆನಪಾಗಿದೆ ತಿಲಬೆಲ್ಲ
ಸಂಕ್ರಮಣದ ಸ್ವಾದ
ಮುಂಜಾನೆಯ ಮಬ್ಬಿನಲಿ
ಕೇಳಿದೆ ಕುಶಲೋಪರಿ
ಮೊಗ್ಗು ಹಿಗ್ಗು ಗಂಧ ಗಾಳಿ
ಬೆಳಕಾಗುವ ಪರಿ.
-ನಿಂಗಮ್ಮ ಅಶೋಕ ಭಾವಿಕಟ್ಟಿ, ಹುನಗುಂದ
*****