ಬೆಂಗಳೂರು: ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು…””ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂದು ಗುಡುಗಿದ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ, ಕನ್ನಡದ ಶ್ರೇಷ್ಠ ಕವಿ, ಚಿಂತಕ ಡಾ.ಸಿದ್ಧಲಿಂಗಯ್ಯ ಅವರು ಶುಕ್ರವಾರ ಸಂಜೆ ನಿಧನರಾದರು. ಅವರಿಗೆ 67 ವರ್ಷವಾಗಿತ್ತು. ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಹಿರಿಯ ಕವಿಗಳು ಅಗಲಿದ್ದಾರೆ.
ಶನಿವಾರ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿರುವ ಕಲಾಗ್ರಾಮ ದಲ್ಲಿ ಸರಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರನಡೆಯಲಿದೆ.
ಕವಿಗಳ ಬಳ್ಳಾರಿ ನಂಟು: ಸರಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಿಭಜಿತ ಬಳ್ಳಾರಿ ಜಿಲ್ಲೆಗೆ ನೂರಾರು ಬಾರಿ ಬಂದಿರುವ ಹಂಪಿ ಕನ್ನಡವಿವಿಯೊಂದಿಗೆ ವಿಶೇಷ ನಂಟು ಹೊಂದಿದ್ದರು. ಪ್ರತಿಷ್ಠಿತ ನಾಡೋಜ ಪದವಿಯನ್ನು ನೀಡಿ ವಿವಿ ಗೌರವಿಸಿತ್ತು.
ಕಳೆದ ವರ್ಷ ಜ.6 ಮತ್ತು 7 ರಂದು ಬಳ್ಳಾರಿಗೆ ಬಂದಿದ್ದೇ ಪ್ರಸಿದ್ಧ ಕವಿ ಡಾ. ಸಿದ್ದಲಿಂಗಯ್ಯ ಅವರ ಗಣಿನಾಡಿನ ಕೊನೆಯ ಭೇಟಿಯಾಯ್ತು….ಜ.6ರಂದು ರಂಗತೋರಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರುದಿನ ಬೆಂಗಳೂರಿಗೆ ವಾಪಸು ಹೊರಡುತ್ತಿರುವ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಸಾಪ ಸಮ್ಮೇಳನ ನಡೆಯುತ್ತಿರುವ ವಿಷಯ ತಿಳಿದು ಪ್ರೀತಿಯಿಂದ ಡಾ.ಜೋಳದ ರಾಶಿ ದೊಡ್ಡನಗೌಡರ ರಂಗಮಂದಿರಕ್ಕೆ ಬಂದು ಸುಮಾರು ಒಂದು ಗಂಟೆ ಪಾಲ್ಗೊಂಡಿದ್ದು ಅವರ ಕನ್ನಡ ಪ್ರೀತಿ, ಸರಳ ಸಜ್ಜನಿಕೆಗೆ ಸಾಕ್ಷಿಯಾಗಿತ್ತು.. ಚಿತ್ರ ಕಲಾ ಪ್ರದರ್ಶನದ ಮಳಿಗೆಗೆ ಚಿತ್ರಕಲಾವಿದರು ಆಹ್ವಾನಿಸಿದಾಗ ಹಮ್ಮು ಬಿಮ್ಮ ಇಲ್ಲದೇ , ಹಿರಿಯರು,ಯುವ ಚಿತ್ರ ಕಲಾವಿದರ ಚಿತ್ರಗಳನ್ನು ವೀಕ್ಷಿಸಿ ಉದಯೋನ್ಮುಖ ಕಲಾವಿದರನ್ನು ಬೆನ್ನು ತಟ್ಟಿ ಉತ್ತೇಜನ ನೀಡಿದ್ದರು.
ಡಿಸಿಎಂ ಸವದಿ ಅಶ್ರುತರ್ಪಣ: ಹಿರಿಯ ಕವಿ ಸಿದ್ದಲಿಂಗಯ್ಯ ಅವರು ಶುಕ್ರವಾರ ನಿಧನರಾಗಿದ್ದು ನಿಜಕ್ಕೂ ದುಃಖದ ಸಂಗತಿಯಾಗಿದೆ. ಈ ಬಾರಿಯ ಕರೋನಾ ಅಲೆಯಲ್ಲಿ ಹಲವು ಪ್ರತಿಭಾವಂತ ಮತ್ತು ಸೃಜನಶೀಲ ವ್ಯಕ್ತಿಗಳನ್ನು ಕಳೆದುಕೊಂಡ ದುಃಖದಲ್ಲಿ ನಾವು ಇರುವಾಗಲೇ ಈಗ ಮತ್ತೊಬ್ಬ ಕ್ರಿಯಾಶೀಲ ಕವಿ ಸಿದ್ದಲಿಂಗಯ್ಯ ಅವರು ಇನ್ನಿಲ್ಲವಾಗಿರುವುದು ನಮಗೆಲ್ಲ ಮತ್ತಷ್ಟು ನೋವು ತಂದಿರುವ ಬೆಳವಣಿಗೆಯಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಂತಾಪ ಸೂಚಿಸಿದ್ದಾರೆ.
ಸರಳ, ಸಜ್ಜನ ಮತ್ತು ಪ್ರಗತಿಪರ ವಿಚಾರಧಾರೆಯ ಸಿದ್ದಲಿಂಗಯ್ಯನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ವೈಚಾರಿಕ ವಲಯಕ್ಕೆ ದೊಡ್ಡ ಆಘಾತವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಲಕ್ಷ್ಮಣ ಸವದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕಹಳೆ ಕಂಬನಿ: ಮೃದುಮಾತಿನ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ತಮ್ಮ ಕಾವ್ಯದಲ್ಲಿ ಕ್ರಾಂತಿ ಕಿಡಿಗಳನ್ನು ಹೊತ್ತಿಸಿ ಶೋಷಿತ ಸಮುದಾಯಗಳಿಗೆ ಬೆಳಕನ್ನು ನೀಡಿದ ಸಂತ ಎಂದು ಕರ್ನಾಟಕ ಕಹಳೆ ಡಾಟ್ ಕಾಮ್ ಕಂಬನಿ ಮಿಡಿದಿದೆ.
*****