ಸಿರಿಗನ್ನಡ ಮಹಿಳಾ ವೇದಿಕೆ ಸಹಯೋಗ:
ಪ್ರಜಾ ಕವಿ ಡಾ. ಸಿದ್ಧಲಿಂಗಯ್ಯರಿಗೆ ರಾಷ್ಟ್ರಕವಿ ಬಿರುದು ನೀಡಲು ಸಿ.ಮಂಜುನಾಥ್ ಒತ್ತಾಯ
ಬಳ್ಳಾರಿ: ದನಿ ಇಲ್ಲದವರ ದನಿ, ಹಿರಿಯ ಕವಿ ನಾಡೋಜ ಡಾ. ಸಿದ್ಧಲಿಂಗಯ್ಯ ಅವರಿಗೆ ನಗರದ ಶ್ರೀ ಮೇಧಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅರ್ಥಪೂರ್ಣ ನುಡಿ ನಮನ ಸಲ್ಲಿಸಿದರು.
ಸಿರಿಗನ್ನಡ ವೇದಿಕೆ, ಮಹಿಳಾ ಘಟಕ ಮತ್ತು ಶ್ರೀ ಮೇಧಾ ಪದವಿ ಕಾಲೇಜ್ ಸಹಯೋಗದಲ್ಲಿ ನಡೆದ ಗೂಗಲ್ ಮೀಟ್ ಮೂಲಕ ನಡೆದ ನುಡಿನಮನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.
ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್ ಅವರು ಮಾತನಾಡಿ ಪ್ರತಿಭಟನಾ ಕಾವ್ಯದ ದಿಕ್ಕನ್ನೇ ಬದಲಾಯಿಸಿದ ಪ್ರಜಾ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ಕೂಡಲೇ ರಾಷ್ಟ್ರಕವಿ ಬಿರುದು ನೀಡಬೇಕು ಎಂದು ಒತ್ತಾಯಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ಸಿದ್ಧಲಿಂಗಯ್ಯ ಅಧ್ಯಯನ ಪೀಠ ಆರಂಭಿಸುವ ಮೂಲ ಅಗಲಿದ ಮಹಾ ಚೇತನಕ್ಕೆ ಗೌರವ ಸಲ್ಲಿಸಬೇಕು ಎಂದರು.
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಆತ್ಮಕಥನ, ಸಂಶೋಧನೆ ಹೀಗೆ ಹಲವು ಪ್ರಕಾರಗಳಿಗೆ ಅಮೂಲ್ಯ ಕೊಡುಗೆ ನೀಡಿದ ಡಾ.ಸಿದ್ಧಲಿಂಗಯ್ಯ ಅವರದು ಅನನ್ಯ ಪ್ರತಿಭೆ ಎಂದು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮೇಧಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ರಾಮಕಿರಣ್ ಅವರು ಡಾ.ಸಿದ್ಧಲಿಂಗಯ್ಯ ಅವರ ಹೋರಾಟ ಅನುಕರಣೀಯ. ಸಾಹಿತ್ಯ ಮೂಲಕ ಪ್ರತಿಭಟನೆಯನ್ನು ದಾಖಲಿಸಿದರೂ ಎಂದಿಗೂ ಹಿಂಸೆಯನ್ನು ಬೆಂಬಲಿಸಲಿಲ್ಲ. ಸಮಸಮಾಜಕ್ಕೆ ಅವರು ಸದಾ ಮಿಡಿಯುತ್ತಿದ್ದರು. ಹಿರಿಯ ಕವಿಗಳ ಆದರ್ಶ ಬದುಕು, ಹೋರಾಟ ವಿದ್ಯಾರ್ಥಿ ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.
ಡಾ.ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು.
ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯದ ಅಧೀಕ್ಷಕ, ಕವಿ, ಜಿ. ಶಿವಕುಮಾರ್ ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳೇ ಆನ್ ಲೈನ್ (ವೆಬಿನಾರ್)ಮೂಲಕ ಆಯೋಜಿಸಿ ನಾಡಿನ ಹಿರಿಯ ಕವಿಗೆ ಸಲ್ಲಿಸುತ್ತಿರುವ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯ. ಡಾ. ಸಿದ್ದಲಿಂಗಯ್ಯ ಅವರು ತಮಗೆ ಗುರು, ಮಾರ್ಗದರ್ಶಕರಾಗಿದ್ದರು. ಸಮಾಜದ ಸೌಖ್ಯದ ಜತೆ ತಮ್ಮ ಒಡಹುಟ್ಟಿದ ಸಹೋದರ ಸಹೋದರಿಯರ ಕುಟುಂಬಗಳ ಯೋಗ ಕ್ಷೇಮವನ್ನು ನಿರ್ಲಕ್ಷಿಸುತ್ತಿರಲಿಲ್ಲ ಎಂದು ಹೇಳುವಾಗ ಸೋದರಳಿಯ ಶಿವಕುಮಾರ್ ಗದ್ಗಿತರಾದರು.
ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರೂ ಆಗಿರುವ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಮಾ ವೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸಿದ್ಧ ಸಾಹಿತಿಗಳಾಗಿದ್ದರೂ ಎಲ್ಲರ ಜತೆ ಸರಳವಾಗಿ ಬೆರೆಯುತ್ತಿದ್ದ, ಮಾರ್ಗದರ್ಶನ ನೀಡುತ್ತಿದ್ದ ಅವರ ವ್ಯಕ್ತಿತ್ವ ಮಾದರಿ. ದಶಕಗಳಿಂದ ಅವರ ಜತೆಗಿನ ಸಾಹಿತ್ಯ ಒಡನಾಟವನ್ನು ಸ್ಮರಿಸಿಕೊಂಡು ಭಾವುಕರಾದರು.
ಆಂಗ್ಲ ಉಪನ್ಯಾಸಕಿ ಡಾ. ಸುಚೇತನಾ ಪೈ ಅವರು ಮಾತನಾಡಿದರು.
ನನ್ನ ಮೆಚ್ಚಿನ ಕವಿ ಡಾ. ಸಿದ್ದಲಿಂಗಯ್ಯ ವಿಷಯದ ಕುರಿತು ಬಿಸಿಎ ಎರಡನೇ ಸೆಮ್ ವಿದ್ಯಾರ್ಥಿನಿ ಕೀರ್ತಿ, ಕವಿಗಳ ಸಾವಿರಾರು ನದಿಗಳು ಕೃತಿ ಬಗ್ಗೆ ಅನುಷಾ, ಕವಿತೆಗಳನ್ನು ಶ್ರೇಯಾ, ದೀಪಕ್ ಮತ್ತು ಚಂದನಾ ಸುಶ್ರಾವ್ಯವಾಗಿ ಹಾಡಿದರು.
ಬಿಸಿಎ ಆರನೇ ಸೆಮ್‌ವಿದ್ಯಾರ್ಥಿನಿ ಚಂದನಾ ದೇಸಾಯಿ ಪ್ರಾರ್ಥಿಸಿದರು. ಬಿಕಾಂ ಎರಡನೇ ಸೆಮ್ ವಿದ್ಯಾರ್ಥಿ ಕಿಶೋರ್ ಸ್ವಾಗತಿಸಿದರು. ವಿಶೇಷವೆಂದರೆ ಬಿಸಿಎ ನಾಲ್ಕನೇ ಸೆಮ್ ವಿದ್ಯಾರ್ಥಿ ಕೌಸ್ತುಭ ಭಾರದ್ವಾಜ್ ತಾಂತ್ರಿಕ ನಿರ್ವಹಣೆ ಜತೆ ನಿರೂಪಣೆ ಮಾಡಿ ಗಮನ ಸೆಳೆದರು. ಬಿಸಿಎ ದ್ವೀತಿಯ ಸೆಮ್ ವಿದ್ಯಾರ್ಥಿ ಫಕ್ಕೀರಪ್ಪ ವಂದಿಸಿದರು.
*****