ಬೆಂಕಿ ಉಂಡೆಯ ಕಾವ್ಯ ಗುರು
ಮೊದಲ ಸಲ
ಬರೆಯುವ ಕೈಗಳ ನಡುಕ
ಮೆದುಳಿನಿಂದಾಚೆ ಬಾರದ ಪದಗಳು
ಹೃದಯ ಸೋತು ನಿಶ್ಯಬ್ದ
ಮಂಕು ಕವಿದ ಅಕ್ಷರಗಳು.
ಕವಿತೆ ಹೊಮ್ಮುವ ಕಾಲದಿಂದ
ನೀನೇ ಕಾವ್ಯ ಗುರುವೆಂದು
ನೀನೇ ಊರುಕೇರಿ ದೊರೆಯೆಂದು
ಪದ್ಯ ಕಟ್ಟಿದವರು
ಗಡ್ಡ ಬಿಟ್ಟವರು ನಾವು
ಗೀಚಿದ ಕವಿತೆಗಳೆಷ್ಟೋ..
ಬೆಳೆದ ಕವಿಗಳೆಷ್ಚೋ..
ಹೋರಾಡಿದ ಜನಗಳೆಷ್ಟೋ..
ದುಡಿದ ಕೈಗಳೆಷ್ಟೋ..
ಹಾಡಿದ ಗಾಯಕರೆಷ್ಟೋ..
ಹೊಲೆಮಾದಿಗರ ಭಾವಜೀವಿ
ಸಾವಿರಾರು ನದಿಗಳ ಕಾವ್ಯದೇವಿ
ನೊಂದವರಿಗೆ ಪ್ರೀತಿ
ಬಡವರ ನಗುವಿನ ಶಕ್ತಿ
ಊರುಕೇರಿಯ ದೊರೆಯೇ
ವಿಧಾನಸೌಧದಿ ಗುಡುಗಿದ ಗುಡುಗೇ.
ಉರಿಯುತ್ತಿದೆ ಹಾಗೆ
ನೀ ಹಚ್ಚಿದ
ಬೆಂಕಿ ಉಂಡೆಯ ಕಾವ್ಯ
ಕಾರುಣ್ಯದ ಬೆಳಕು ಬೀರುತ್ತ
ಉಳ್ಳವರ, ಇಲ್ಲದವರ
ಅಂತರಂಗ-ಬಹಿರಂಗದ ನಡುವೆ.
– ಡಾ. ಬಿ. ಆರ್. ಕೃಷ್ಣಕುಮಾರ್ ಬಿಸಲವಾಡಿ, ಚಾಮರಾಜನಗರ
*****