ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹಾಗೂ ಅವರ ಜೊತೆಗೆ ಬಂದಿರುವ ಕೇರ್ ಟೇಕರ್ ಗಳಿಗೆ ಅಬ್ರಾಡ್ ಟೀಮ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಜೈನ್ ಸಂಘದ ವತಿಯಿಂದ ಊಟವನ್ನು ವಿತರಿಸಲಾಯಿತು.
ಗುರುವಾರ ಸಂಜೆ ರೂಪ ವಿಶ್ವನಾಥ್, ಸವಿತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹಸಿದವರ ಹೊಟ್ಟೆಗೆ ಅನ್ನ ಕೊಡಿ ತತ್ವದಡಿ ಕಾರ್ಯರೂಪಕ್ಕೆ ತಂದಿರುವ ಈ ಕಾರ್ಯಕ್ರಮ ಕೊರೋನಾ ವೈರಸ್ ಹಾವಳಿ ಶುರುವಾದನಿಂದಲೂ ನಿತ್ಯ ಊಟವನ್ನು ಉಚಿತವಾಗಿ ಹಂಚಲಾಗುತ್ತಿದೆ.
ನಿತ್ಯ ಊಟ ಹಂಚುವ ಕಾರ್ಯಕ್ರಮದ ಮುಂದಾಳತ್ವವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಮಂಡಳಿಯ ನಿರ್ದೇಶಕಿ ಗಾಯಿತ್ರಿ ಶಿವರಾಂ ಮತ್ತು ಶಿವರಾಂ ದಂಪತಿ ನಿತ್ಯ ಕಾಯಕ ಎಂಬಂತೆ ಕಳೆದ 45 ದಿನಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.
ಪ್ರತಿ ದಿನ ಸಂಜೆಯ ವೇಳೆಗೆ ಬಿಸಿಬಿಸಿ ಊಟ ಚಿತ್ರದುರ್ಗ ಸಮೀಪದ ಸಿಬಾರ ಬಳಿ ಇರುವ ವಿಶ್ವ ಮಾನವ ವಸತಿ ಶಾಲೆಯಲ್ಲಿ ತಯಾರಾಗಿ ಸರಬರಾಜಾಗುತ್ತಿದೆ. ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಜನರಿಗಾಗಿ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಪ್ರಮಾಣಿಕವಾಗಿ ಜನಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ವಿಶೇಷ.
ಊಟವನ್ನು ವಿತರಿಸುವ ವೇಳೆ ಜೈನ್ ಸಮಾಜ ಸಂಘಟನೆಯವರು ಸ್ವಯಂ ಪ್ರೇರಣೆಯಿಂದ ಊಟ ವಿತರಣೆಯ ಜವಾಬ್ದಾರಿಯನ್ನು ನಿಭಾಯಿಸುವ ಮುಖಾಂತರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಊಟ ವಿತರಣೆ ವೇಳೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜರ್, ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್, ಪ್ರದೀಪ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
*****