ಅನುದಿನ ಕವನ-೧೬೮, ಕವಯತ್ರಿ:ವಸು ವತ್ಸಲ, ಕವನದ ಶೀರ್ಷಿಕೆ:ಅಪ್ಪಾ….ನನ್ನಪ್ಪಾ!

ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರ ಅಕಾಲಿಕ ಅಗಲಿಕೆಯಿಂದ ಕುಟುಂಬ ಸದಸ್ಯರು, ಬಂಧು ಮಿತ್ರರು, ಹಿತೈಷಿಗಳು, ಅಭಿಮಾನಿಗಳು ದುಃಖದ ಮಡುವಿನಿಂದ ಹೊರಬಂದಿಲ್ಲ.

ಕವಿಗಳ ಏಕೈಕ ವೈದ್ಯ ಪುತ್ರಿ ಡಾ. ಮಾನಸಾ ಅವರು ಅನಾರೋಗ್ಯಕ್ಕೆ ತುತ್ತಾದ ತಮ್ಮ ತಂದೆಯವರನ್ನು ಉಳಿಸಿಕೊಳ್ಳಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಗಲು ರಾತ್ರಿ ವೈದ್ಯೋಪಚಾರ ಮಾಡಿ ಉಳಿಸಿಕೊಳ್ಳಲು ಆಗದಿದ್ದಕ್ಕೆ ತುಂಬಾ ದುಃಖಪಟ್ಟಿದ್ದಾರೆ. ವೇದನೆಯಲ್ಲಿದ್ದಾರೆ.
ತಮ್ಮ ಸಹೋದರ, ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮುನ್ನ ಡಾ. ಮಾನಸ ರೋಧಿಸುತ್ತಾ “ಅಪ್ಪಾ….ನನ್ನನ್ನು ಕ್ಷಮಿಸಿ ಬಿಡು, ಹಗಲು ರಾತ್ರಿ ಶ್ರಮಪಟ್ಟರೂ ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ” ಎಂದು ಹೇಳುತ್ತಿದ್ದನ್ನು ಕೇಳಿಸಿಕೊಂಡ ಹತ್ತಿರದ ಬಂಧು ಮಿತ್ರರ ದುಃಖ ಇಮ್ಮಡಿಯಾಗಿತ್ತು.
ಡಾ. ಸಿದ್ಧಲಿಂಗಯ್ಯ ಅವರ ಅಭಿಮಾನಿ, ಕವಯತ್ರಿ ವಸು ವತ್ಸಲ ಅವರು ಡಾ. ಮಾನಸ ಅವರ ದುಃಖ, ನೋವನ್ನು ಅನುಭವಿಸಿ ಬರೆದ ಕವಿತೆ ಇದು…😢 👇

ಅಪ್ಪಾ…ನನ್ನಪ್ಪಾ….!

ನೀನಿಲ್ಲದ ಮನೆ ಮನ ಬಿಕ್ಕುತ್ತಿದೆ ಅಪ್ಪಾ..
ನಿರ್ವಾತದಲ್ಲೂ ನಿನ್ನ ನಗೆ ಪ್ರತಿಧ್ವನಿಸಿದೆಯಪ್ಪಾ
‘ಮಾನು’ ಎಂದೊಮ್ಮೆ ಕೂಗಿಬಿಡು ನನ್ನಪ್ಪಾ
ನೀನು ಕವಿಯೋ, ಮತ್ತೇನೋ ಕಾಣೆ!
ನೀ ನನ್ನ ಜಗವೇ ಆಗಿದ್ದೆಯಪ್ಪಾ….

ಕಾಲೇಜಿಗೆ ಬಸ್ ಹತ್ತಿಸಿ, ಕಣ್ಣ ತೇವ ಒರೆಸಿದೆ..
ನಾ ಬರುವ ತನಕ ದಾರಿ ಕಾಯುತ್ತಿದ್ದೆ
ಒಂದು ದಿನವೂ ನಾನಿಲ್ಲದೆ ,ನಿನ್ನ
ದಿನವ ಮುಗಿಸದೆ ಕಾದವ ನೀನು….
ಈಗೇಕೆ ….ಮೌನವಾಗಿ ನನ್ನಿಂದ ದೂರಾದೆ

ನೀ ಆಸ್ಪತ್ರೆಯ ಶರಶಯ್ಯೆಯಲ್ಲಿ ಮಲಗಿಬಿಟ್ಟೆ
ನಾನು ಕ್ಷಣವೂ ವಿರಮಿಸಲಿಲ್ಲ……
ನಿನ್ನ ಉಸಿರು ಕಾದೆ,ಹಗಲು ರಾತ್ರಿ ಎಣಿಸಿದೆ
ಎಂದೂ ಬೇಡದ ಭಗವಂತನನ್ನೂ ಬೇಡಿದೆ,
ಆದರೂ ನೀ ನನ್ನ ಪಾಲಿಗಿಲ್ಲವಾದೆ….

ನೀ‌ನಿಲ್ಲವೆಂಬ ಸತ್ಯವನು ಇಂದಿಗೂ ಅರಗಿಸದೆ
ಕಂಬನಿಯಲಿ ಮೀಯುತ್ತಾ….ಮರುಗಿದೆ
ಆಕಾಶವೆಲ್ಲ ಕತ್ತಲೆಯ ಕಾಡಿನಂತೆ ಕಾಡಿಸುತ್ತಿದೆ
ಭೂಮಿಯ ಬೆಳಕೆಲ್ಲ ಕಣ್ಣ ಚುಚ್ಚುತ್ತಿದೆ….
ನೀನಿಲ್ಲದ ಈ ನನ್ನ ಜಗ ಖಾಲಿಯಾಗಿದೆಯಪ್ಪಾ
‘ಮಾನು’ ಎಂದೊಮ್ಮೆ ಕೂಗಿ ಬಿಡು ನನ್ನಪ್ಪ…..

– ವಸು ವತ್ಸಲೆ
*****