ನಾನಂದ್ರೆ ನನಗಿಷ್ಟ…..
ನೋವುಗಳ ಸಹಿಸುತೀನಿ
ಹಠ ಬಂದರೆ ರಮಿಸುತೀನಿ
ತಪ್ಪುಗಳನ್ನೊಪ್ಪಿಕೊಳುತೀನಿ
ಅನುಭವಗಳಾನಂದಿಸುತೀನಿ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ಕಳೆದು ಹೋಗಲು ಬಿಡದೆ
ಬದುಕುವಾಸೆಯ ಬೆಳೆಸುತೀನಿ
ಕಳವಳಗೊಂಡ ಮನವ
ಬುದ್ಧಿ ಹೇಳಿ ತಿದ್ದುತೀನಿ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ಜೀವ ತಿನ್ನುವ ನೆನಪ
ಹತ್ತಿಕ್ಕಿ ಬಿಡುತೀನಿ
ವಯಸು ಸೊಗಸುಗಳಾಚೆಗೂ
ಮೀರಿ ಚಿಂತಿಸುತೀನಿ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ಶಬ್ದ ಚಿತ್ರವಾಗಿಸಿ ಅದಕೆ
ಭಾವನೆಗಳ ಜೀವ ತುಂಬಿ
ಹಾಡಿ ಆಡಿಸುತೀನಿ
ಮಕ್ಕಳಂತವುಗಳ ಮೈಮರೆತು
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ನಕಾರಗಳನ್ನೆಲ್ಲ ಸಕಾರಗೊಳಿಸಿ
ಬತ್ತಿ ಚಾಚಿ ದೀಪ ಹಚ್ಚಿ
ಗಂಧದಲ್ಲಾನಂದದೆಣ್ಣೆ ಉಣಿಸಿ
ನೋಡಿಕೊಳ್ಳುವೆ ನನ್ನಾಬೆಳಕಲಿ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ಆಸೆಗಳಾಳಕಿಳಿಯದೆ
ಬಾರದು ಬಪ್ಪದೆಂದು
ತಪ್ಪದೆ ಒಪ್ಪಿಕೊಂಡು
ತೃಪ್ತಿ ಪಡುತೀನಿ ಇದ್ದುದನೇ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ಇಲ್ಲಗಳ ನಡುವೆ ಇರದೆ
ಇದ್ದುದನಪ್ಪಿ ಮೆಚ್ಚಿ
ಹರುಷ ಪಡುತೀನಿ ಮತ್ತೆ
ಹೆಮ್ಮೆಪಡುತೀನಿ ಬೀಗಿ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
ದುರ್ಗಮ ದಾರಿಯ ದಾಟಿ
ಕಷ್ಟಗಳ ಕಣಿವೆಗಳನಿಳಿದು
ಸಾವರಿಸಿಕೊಂಡು ಸಾರಾಗವಾಗಿ
ಜೋಲಿಹಿಡಿದು ನಡೆಯಬಲ್ಲೆ
ನನಗೆ ನಾನೆ ! ಅದಕೆ
ನಾನಂದ್ರೆ ನನಗಿಷ್ಟ
-ನಿಂಗಮ್ಮ ಅಶೋಕ ಭಾವಿಕಟ್ಟಿ, ಹುನಗುಂದ
*****