ಭಯಬಿಡಿ ಕೋವಿಡ್ ಲಸಿಕೆ ಪಡೆಯಿರಿ: ಜಿಲ್ಲಾಧಿಕಾರಿ ಮಾಲಪಾಟಿ

ಬಳ್ಳಾರಿ: ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಲಸಿಕೆಯೊಂದೇ ನಮಗಿರುವ ದಿವ್ಯ ಔಷಧ. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಸಾರ್ವಜನಿಕರೆಲ್ಲಾ ಭಯ ಬಿಟ್ಟು ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಲ್ರ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಕೋವಿಡ್ ಲಸಿಕೆ ಹಾಗೂ ಕೋವಿಡ್ ಮುಂಜಾಗೃತೆ ಕುರಿತು ಜನಜಾಗೃತಿಯ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗೃತಿ ರಥವು ತಾಲೂಕಿನ 27 ಹಳ್ಳಿಗಳಲ್ಲಿ ಸಂಚರಿಸಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಜಾಗೃತಿ ರಥವು ಕರೋನಾ ಮಾಹಿತಿಯ ಭಿತ್ತಿಪತ್ರವನ್ನು ಹೊಂದಿದ್ದು, ಮೈಕ್ ಮೂಲಕ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಚರಿಸಲಿದೆ ಎಂದರು.
ಈ ಸಮಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟೀಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ವಲ್ರ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರಾದ ಪ್ರೇಮಲತಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಮ್ಮ ಮತ್ತು ಸಿಬ್ಬಂದಿ ಹಾಗೂ ಇತರರು ಇದ್ದರು.
*****