ಅನುದಿನ ಕವನ-೧೭೯, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಜಗಧರ್ಮ

“ಇದು ನಮ್ಮ ನಿಮ್ಮದೇ ಬದುಕುಗಳ ನಿತ್ಯ ಸತ್ಯ ಕವಿತೆ. ಪ್ರತಿ ಜೀವ ಅನುಭವಿಸಿರುವ ಅನಿವಾರ್ಯ ನೋವಿನ ಭಾವಗೀತೆ. ನಿಮ್ಮ ಸಣ್ಣದೊಂದು ದೋಷ, ದುಡುಕು, ಅವಗುಣಗಳನ್ನು ನೆನಪಿಡುವಷ್ಟು, ನಿಮ್ಮ ಕೋಟಿ ಒಳ್ಳೆಯ ಗುಣಗಳನ್ನಾಗಲೀ, ಸತ್ಕಾರ್ಯಗಳನ್ನಾಗಲೀ ಜನರು ನೆನಪಿಡುವುದಿಲ್ಲ. ದೂರದವರಿರಲಿ ನಿಮ್ಮಿಂದ ಸಕಲ ಸಹಕಾರ, ಉಪಕಾರ ಉಂಡ ಸುತ್ತಮುತ್ತಲಿನವರು ಕೂಡ ಸ್ಮರಿಸುವುದಿಲ್ಲ. ಯುಗಧರ್ಮ, ಜಗಧರ್ಮಗಳಿರುವುದೇ ಹೀಗೆ. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇

ಜಗಧರ್ಮ!
ಅನವರತ ಹರಿಸಿದ ಅಗಾಧ
ಸಾಗರದಷ್ಟು ಪ್ರೀತಿಯನೆಂದೂ
ನೆನಪಿಡುವುದಿಲ್ಲ ಮಂದಿ.!

ಅಪ್ಪಿತಪ್ಪಿ ಅರಿವಿಲ್ಲದೆ ನೀಡಿದ
ಬೊಗಸೆಯಷ್ಟು ನೋವನ್ನೇ
ನೆನಪಿಡುತ್ತಾರೆ ಜತನದಿ.!

ಜೀವಮಾನವಿಡೀ ಮಾಡಿದ
ಸಾವಿರದಷ್ಟು ಒಪ್ಪುಗಳನೆಂದೂ
ಲೆಕ್ಕವಿಡುವುದಿಲ್ಲ ಜನರು.!

ಆಕಸ್ಮಿಕ ಮೈಮರೆತು ಘಟಿಸಿದ
ಸಾಸುವೆಯಷ್ಟು ತಪ್ಪುಗಳನೇ
ಎತ್ತೆತ್ತಿ ತೋರಿ ಆಡುವರು.!

ಸೇವೆ ಸಾಧನೆ ಸತ್ಕಾರ್ಯ
ನುಡಿವುದಿಲ್ಲ ನೆನೆವುದಿಲ್ಲ
ಒಳ್ಳೆಯದೆಲ್ಲಕೂ ಜಾಣಮರೆವು.!

ಲೋಪ ನ್ಯೂನತೆಗಳನೆಣಿಸಿ
ಹೇಳಿ ಎಲ್ಲೆಡೆ ಹರಡಲಿಕ್ಕೆ
ಅದೆಂತಹ ಅಪಾರ ಹಸಿವು.!

ಎಡವಿದ ಒಂದುಹೆಜ್ಜೆ ಸಾಕು
ದಾಟಿದ ಸಾವಿರ ಮೈಲುಗಳ
ಶ್ರೇಯಸ್ಸೆಲ್ಲ ಹಾಳುಗೆಡವಲು.!

ಆರೋಪದೊಂದು ಕಿಡಿ ಸಾಕು
ಜಗದ ಕಂಗಳೊಳಗೆ ನಮ್ಮಯ
ಚಿತ್ರಣವೇ ಚಿತೆಯಾಗಿ ಹೋಗಲು.!

-ಎ.ಎನ್.ರಮೇಶ್. ಗುಬ್ಬಿ.
*****