“ಒಮ್ಮೆ ಕಣ್ಣರಳಿಸಿ ಸುತ್ತಲ ಜನಗಳನ್ನು. ನೋಡಿದರೆ.. ಸೂಕ್ಷ್ಮವಾಗಿ ನಿಮ್ಮ ಸುತ್ತಮುತ್ತಲ ಜೀವನಗಳನ್ನು ಅವಲೋಕಿಸಿ ನೋಡಿದರೆ.. ಈ ಕವಿತೆಯಲ್ಲಿರುವ ತರಹದ ವ್ಯಕ್ತಿ, ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಅಷ್ಟೇ ಏಕೆ ಏಷ್ಟೋಬಾರಿ ನಮ್ಮದೇ ಬದುಕಿನ ವಿವಿಧ ಮಜಲುಗಳಲ್ಲಿ ನಾವೇ ಹೀಗೆ ವರ್ತಿಸಿರುತ್ತೇವೆ. ಹಾಗಾಗಿ ಇದು ನಮ್ಮ ನಿಮ್ಮದೇ ಕವಿತೆ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥಗಳಿವೆ. ಅರ್ಥೈಸಿದಷ್ಟೂ ಹತ್ತು ಹಲವು ಭಾವಗಳಿವೆ. ಏನಂತೀರಾ.?”
– 💙ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇
ವ್ಯರ್ಥ ವ್ಯರ್ಥ..!
ಖುಷಿಗೂ ಇಲ್ಲ
ಕಷ್ಟಕೂ ಇಲ್ಲ
ಜೊತೆಯೇ ಇರುವೆ.!
ಆಟಕೂ ಇಲ್ಲ
ಪಾಠಕೂ ಇಲ್ಲ
ಲೆಕ್ಕಕಷ್ಟೇ ಇರುವೆ.!
ಹೆರಲೂ ಇಲ್ಲ
ಹೊರಲೂ ಇಲ್ಲ
ಸಂಸಾರಕೆ ಇರುವೆ.!
ನಂಟಿಗೂ ಇಲ್ಲ
ಗಂಟಿಗೂ ಇಲ್ಲ
ಅಂಟಿಕೊಂಡೇ ಇರುವೆ.!
ಸ್ಫೂರ್ತಿಗೂ ಇಲ್ಲ
ಕೀರ್ತಿಗೂ ಇಲ್ಲ
ಸರತಿಯಲೇ ಇರುವೆ.!
ಮತಿಗೂ ಇಲ್ಲ
ಗತಿಗೂ ಇಲ್ಲ
ಸುತ್ತಲೇ ಇರುವೆ.!
ಹೇಳಲೂ ಇಲ್ಲ
ಕೇಳಲೂ ಇಲ್ಲ
ಹತ್ತಿರವೇ ಇರುವೆ.!
ಹಿಡಿಯಲಿಕ್ಕು ಇಲ್ಲ
ಬಿಡಲಿಕ್ಕೂ ಇಲ್ಲ
ಸಂಗಡವೇ ಇರುವೆ.!
ಸ್ಪಂದನವು ಇಲ್ಲ
ಬಂಧನವು ಇಲ್ಲ
ಕೊರಡಾಗಿ ಬರಡಾಗಿ
ಬಾಳೆಲ್ಲ ಬಳಿಯಿರುವೆ.!
-ಎ.ಎನ್.ರಮೇಶ್, ಗುಬ್ಬಿ. *****