ಅಗತ್ಯ ಕೌಶಲ್ಯ ವೃದ್ಧಿಸಿಕೊಂಡರೆ ಮಾತ್ರ ಸೂಕ್ತ ಉದ್ಯೋಗ -ಸಿ.ಕೆ ನಾಗರಾಜ್

ಬಳ್ಳಾರಿ,ಜು.16: ಯುವಜನರು ಪ್ರಸ್ತುತ ದಿನಮಾನಗಳಿಗೆ ತಕ್ಕಂತಹ ಕೌಶಲ್ಯವನ್ನು ವೃದ್ಧಿಸಿಕೊಂಡರೆ ಮಾತ್ರ ಸೂಕ್ತ ಉದ್ಯೋಗ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸಿ.ಕೆ. ನಾಗರಾಜ್ ಅವರು ಹೇಳಿದರು.
ವಿಶ್ವ ಕೌಶಲ್ಯ ದಿನಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯುವಜನರು ಉದ್ಯೋಗವಂತರಾಗಲು ಕೌಶಲ್ಯ ಬಹಳ ಪ್ರಮುಖ ಅಂಶ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್. ಹಟ್ಟಪ್ಪ ಅವರು ಮಾತನಾಡಿ,
ಕೌಶಲ್ಯದ ಮಹತ್ವವನ್ನರಿತು ವಿಶ್ವ ಸಂಸ್ಥೆ ಜುಲೈ 15ನ್ನು 2015ರಿಂದ ವಿಶ್ವ ಕೌಶಲ್ಯ ದಿನವೆಂದು ಅಧಿಕೃತವಾಗಿ ಘೋಷಿಸಿದೆ ಎಂದು ತಿಳಿಸಿದರು.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಕೌಶಲ್ಯ ಸಚಿವಾಲಯಗಳನ್ನು ಸೃಜಿಸಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಸಚಿವಾಲಯದಡಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ, ಡೇ-ನಲ್ಮ್, ಎನ್.ಆರ್.ಎಲ್.ಎಂ., ಸೀಡಾಕ್, ಜಿ.ಟಿ.ಟಿ.ಸಿ., ಕೆ.ಜಿ.ಟಿ.ಟಿ.ಐ.ಗಳು ಬರುತ್ತವೆ. ಈ ಎಲ್ಲಾ ಇಲಾಖೆಗಳು ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಈ ಸೌಲಭ್ಯಗಳನ್ನು ಯುವಜನತೆ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸೀಡಾಕ್ ಸಂಸ್ಥೆಯ ವತಿಯಿಂದ ಒಂದು ದಿನದ ಉದ್ಯಮಶೀಲತಾ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕೆವಿಐ ಉಪನಿರ್ದೇಶಕ ಮಹ್ಮದ್ ಸಾಧಿಕ್ ಉಲ್ಲಾ, ಐಟಿಐ ಕಾಲೇಜಿನ ತರಬೇತಿ ಅಧಿಕಾರಿಗಳಾದ ಜಿ.ನಂದರಾಜ್, ಡೆ-ನಲ್ಮ್ ಅಭಿಯಾನ ವ್ಯವಸ್ಥಾಪಕ ಪ್ರಾಣೇಶ್.ವಿ., ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ, ಸೀಡಾಕ್ ಸಂಸ್ಥೆಯ ವ್ಯವಸ್ಥಾಪಕ ವಿನೋದ್ ಮತ್ತಿತರರು ಇದ್ದರು.
*****