ಪಿಸಿ,ಪಿಎನ್‍ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ಡಿಎಚ್‍ಒ ಡಾ.ಜನಾರ್ಧನ್

ಬಳ್ಳಾರಿ,ಜು.17: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಅನ್ವಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಜನಾರ್ಧನ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪಿಸಿ ಮತ್ತು ಪಿ.ಎನ್.ಡಿ.ಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯ ಅನುಷ್ಠಾನ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಸ್ಕ್ಯಾನ್ ಸೆಂಟರ್ ಗಳಲ್ಲಿ ಸ್ಕ್ಯಾನ್ ಯಂತ್ರದ ಪ್ರತಿಯೊಂದು ಉಪಕರಣಗಳು ಹಾಗೂ ವ್ಯಕ್ತಿಗಳ ದಾಖಲಾತಿಗಳನ್ನು ನೊಂದಣಿಯಾಗಿರಬೇಕು. ಸ್ಕ್ಯಾನ್‍ಮಾಡಿದವರ ಮಾಹಿತಿಯನ್ನು ತಪ್ಪದೇ ನೊಂದಣಿ ಮಾಡಿಸಿರಬೇಕು, ತಪ್ಪಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಕ್ಯಾನ್ ಸೆಂಟರ್ ಗಳಲ್ಲಿ ಭ್ರೂಣಲಿಂಗ ಪತ್ತೆ ನಿಷೇಧ ಕುರಿತು ದೊಡ್ಡ ಅಕ್ಷರಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ನಾಮಫಲಕಗಳನ್ನು ಹಾಕಬೇಕು. ಸ್ಕ್ಯಾನ್ ಸೆಂಟರ್ ಗಳು ಪ್ರತಿ ತಿಂಗಳು ಜಿಲ್ಲಾ ಆಸ್ಪತ್ರೆಗೆ ವರದಿಯನ್ನು ನೀಡಬೇಕು. ಕಾನೂನು ಬಾಹಿರ ಚಟುವಟಿಕೆಗಳು ಕಂಡ ಬಂದಲ್ಲಿ ಅವರ ಮೇಲೆ ಕಾನೂನು ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಈ ಪಿಸಿ ಮತ್ತು ಪಿಎನ್ಡಿಟಿ ಲಿಂಗ ಆಯ್ಕೆಯ ನಿಷೇಧ ಕಾಯ್ದೆ ಅನುಷ್ಠಾನ ಸಮಿತಿಯಲ್ಲಿ ಸಲಹಾ ಸಮಿತಿ ಹಾಗೂ ತಪಾಸಣೆ ಮತ್ತು ಮಾನಿಟರ್ ಸಮಿತಿಯನ್ನು ರಚಿಸಲಾಗಿದೆ. ಯಾವುದೇ ದೂರುಗಳು ಬಂದಲ್ಲಿ ಅವುಗಳನ್ನು ಸಲಹಾ ಸಮಿತಿಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ,ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಭ್ರೂಣ ಲಿಂಗ ಪತ್ತೆ ಯಂತ್ರವಿರುವ ಎಲ್ಲಾ ಕಡೆ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಬೇಕು.ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಲು ಅನುಕೂಲ ಮಾಡಿಕೊಡಿ. ಏನಾದರೂ ತೀವ್ರ ಸಮಸ್ಯೆಯುಂಟಾದರೆ ಮಾತ್ರ ನಗರಗಳತ್ತ ಕರೆತನ್ನಿ.. ಭ್ರೂಣಲಿಂಗ ಹತ್ಯೆ ನಡೆಯದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ ಅವರು ಭ್ರೂಣಲಿಂಗ ಪತ್ತೆ ಮತ್ತು ಲಿಂಗಹತ್ಯೆ ಕಂಡು ಬಂದರೆ ಅಂತಹ ಕೇಂದ್ರಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಕ್ಯಾನ್ ಸೆಂಟರ್ ಗಳಲ್ಲಿ ಭ್ರೂಣಲಿಂಗ ಪತ್ತೆ ಕುರಿತು ದೊಡ್ಡ ಅಕ್ಷರಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ನಾಮಫಲಕಗಳನ್ನು ಹಾಕಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಮಾತನಾಡಿದರು.
ಸಭೆಯಲ್ಲಿ ಸ್ತ್ರೀ ರೋಗ ತಜ್ಞರಾದ ಡಾ.ಶ್ರವಂತಿ, ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ರೇಡಿಯಾಲಜಿಸ್ಟ್ ಡಾ.ಎಸ್.ಶಂಭು, ಆರೋಗ್ಯ ನಿರೀಕ್ಷಾಣಾಧಿಕಾರಿಗಳಾದ ಕೆ.ಹೆಚ್.ಗೋಪಾಲ, ಅರುಣ್ ಕುಮಾರ್ ಮತ್ತು ಇತರೆ ವೈದ್ಯರು ಹಾಗೂ ಸಮಿತಿ ಸದಸ್ಯರು ಇದ್ದರು.
*****