ಜಗಳಗಳೆಂಬ ಕೆಟ್ಟ ಮನಸ್ಥಿತಿಗೆ ವೇದಿಕೆಯಾದ ಕನ್ನಡ ಟಿವಿ ಮಾಧ್ಯಮಗಳು.. -ವಿವೇಕಾನಂದ. ಹೆಚ್.ಕೆ. ಲೇಖಕ- ಹೋರಾಟಗಾರ, ಬೆಂಗಳೂರು

ಕುಮಾರಸ್ವಾಮಿ – ಸುಮಲತಾ
ದರ್ಶನ್‌ – ಇಂದ್ರಜಿತ್………….

ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾರಹಿತವಾಗಿ ವರ್ತಿಸುತ್ತಿರುವ ಈ ಮಾಧ್ಯಮಗಳು……
ಕನಿಷ್ಠ ಪ್ರಜ್ಞೆ ಇಲ್ಲದೆ, ಕೋವಿಡ್ ನಂತರ ಅಸ್ತವ್ಯಸ್ತಗೊಂಡಿರು ಜನರ ಜೀವನದ ಪುನರ್ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವ ಕಾವಲುಗಾರನಾಗದೇ ತೀರಾ ಕೆಳಹಂತಕ್ಕೆ ಇಳಿದಿರುವ ಮಾಧ್ಯಮಗಳು…..
ಒಂದು ಸಮಯದಲ್ಲಿ ಎಷ್ಟೊಂದು ಮಹತ್ವ ಪಡೆದಿದ್ದವು ಈ ಮಾಧ್ಯಮಗಳು. ಅದರ ಒಂದು ವರದಿಗೆ ಸರ್ಕಾರವೇ ಅಲುಗಾಡುತ್ತಿತ್ತು. ಈಗ…..
ಅದಕ್ಕಿಂತ ಸಾಮಾಜಿಕ ಜಾಲತಾಣಗಳೇ ಎಷ್ಟೋ ವಾಸಿ. ತನ್ನೆಲ್ಲಾ ಮಿತಿಗಳು ಮತ್ತು ದುರುಪಯೋಗದ ನಡುವೆಯೂ ಸಾಕಷ್ಟು ಒಳ್ಳೆಯ ಮತ್ತು ಪರಿಣಾಮಕಾರಿ ಚರ್ಚೆಗಳು ನಡೆಯುತ್ತಿವೆ.
ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಗಳು ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ಅಭಿಪ್ರಾಯಗಳು, ಟೀಕೆಗಳು, ಪ್ರೋತ್ಸಾಹಗಳು ಮುಂತಾದ ಚಟುವಟಿಕೆಗಳು ಜಾಲತಾಣಗಳಲ್ಲಿ ನಡೆಯುತ್ತಲೇ ಇರುತ್ತದೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ಬಹುತೇಕ ಯಾವುದೇ ಆದಾಯ ಬರುವುದಿಲ್ಲ. ತೀರಾ ಜನಪ್ರಿಯ ಅಥವಾ ಕೆಲವು ವಾಣಿಜ್ಯ ಉದ್ದೇಶದ ಕೆಲವೇ ಜಾಲತಾಣ ಹೊರತುಪಡಿಸಿ ಎಲ್ಲವೂ ಉಚಿತ.
ಆದರೂ ಅನೇಕ ಸಾಮಾಜಿಕ ಕಳಕಳಿಯ ಜನಪರ ನಿಲುವಿನ ಅನೇಕರು ಇಂದು ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಆದರೆ, ಒಂದು ಪ್ರಜಾಪ್ರಭುತ್ವ ಮುಖ್ಯ ಭಾಗವಾದ ಮಾಧ್ಯಮಲೋಕ ವೈಯಕ್ತಿಕ ತೆವಲಿನ ಕೆಲವು ವ್ಯಕ್ತಿಗಳ ಹುಚ್ಚುತನಕ್ಕೆ, ದಡ್ಡತನಕ್ಕೆ, ಸ್ವಾರ್ಥಕ್ಕೆ ವೇದಿಕೆ ಕಲ್ಪಿಸುವ ಮೂಲಕ ಜನಸಾಮಾನ್ಯರಲ್ಲಿ ಕೆಟ್ಟ ಕುತೂಹಲ ಮೂಡಿಸಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿವೆ…..
ಮನಸ್ಸಿನ ಮೇಲೆ ನಿಯಂತ್ರಣ ಇಲ್ಲದ, ನಾಲಿಗೆಯ ಮೇಲೆ ಹಿಡಿತವಿಲ್ಲದ, ಜನಪ್ರಿಯತೆಯ ಗುಂಗಿನಲ್ಲಿರುವ ಯಾರದೋ ಬೇಜವಾಬ್ದಾರಿ ಹೇಳಿಕೆಯೇ ಈ ಮಾಧ್ಯಮಗಳಲ್ಲಿ ಮಹತ್ವ ಪಡೆಯುತ್ತದೆ ಎಂದರೆ ಇವರ ಗುಣಮಟ್ಟ ಎಷ್ಟು ಕುಸಿದಿರಬಹುದು ಯೋಚಿಸಿ.
ಮುಂಗಾರಿನ ಸಮಯದ ಕೃಷಿಯ ಬಗ್ಗೆ, ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ, ಯುವ ಜನತೆಯ ಭವಿಷ್ಯದ ಕನಸುಗಳ ಬಗ್ಗೆ, ಆಡಳಿತಾತ್ಮಕ ವಿಫಲತೆಯ ಬಗ್ಗೆ ಹೆಚ್ಚು ಮಾತನಾಡದೆ ತಮ್ಮ ವಾಹಿನಿಯ ನಿರ್ವಹಣೆಗಾಗಿ ವ್ಯಕ್ತಿಗಳ ನಡುವೆ ಕಡ್ಡಿ ಗೀರಿ ಬೆಂಕಿ ಹಚ್ಚುವ ಕೆಲವು ಸಂಕೋಚ ಸೂಕ್ಷ್ಮತೆ ಇಲ್ಲದೆ ಮಾಡುತ್ತಿವೆ.
ದೇಶದ ಈ ಸಂದರ್ಭದಲ್ಲಿ ಮಾಧ್ಯಮ ಲೋಕದ ಅಧಃಪತನ ತುಂಬಾ ಅಪಾಯಕಾರಿ. ಭಾಷೆಯ ಮೇಲೆ ಹಿಡಿತವಿಲ್ಲ, ನೈತಿಕತೆಯ ಪ್ರಜ್ಞೆಯಿಲ್ಲ, ಯುವ ಜನರ ಬಗ್ಗೆ ಕಾಳಜಿ ಇಲ್ಲ, ಸಮಗ್ರ ಅಭಿವೃದ್ಧಿಯ ಚಿಂತನೆಯಿಲ್ಲ.
ಕೇವಲ ತಮ್ಮ ಖಾಸಗಿ ಬದುಕಿನ ಬೆಳವಣಿಗೆಗಾಗಿ, ಇತರ ವಾಹಿನಿಗಳಿಗಿಂತ ಹೆಚ್ಚು ಜನಪ್ರಿಯತೆ ಗಳಿಸುವ ಭರದಲ್ಲಿ ಮಾಧ್ಯಮ ಮೌಲ್ಯಗಳ ಅರ್ಥವನ್ನೇ ಕಲುಷಿತ ಗೊಳಿಸುತ್ತಿವೆ….
ಇದನ್ನು ಮನಗಂಡೇ ಕೆಲವರು ತಮ್ಮ ಜನಪ್ರಿಯತೆಯ ಹುಚ್ಚಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮಾಧ್ಯಮಗಳಿಗೆ ಅದೇ ಸರಕು.
ಬೇಡ, ಹೊಟ್ಟೆ ಪಾಡಿಗಾಗಿ ಒಂದು ಜವಾಬ್ದಾರಿ ವ್ಯವಸ್ಥೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಬೇಡ. ತನ್ನಲ್ಲಿ ಪ್ರಸಾರವಾಗುವ ಸುದ್ದಿಗಳು ಒಂದಷ್ಟು ಘನತೆಯಿಂದ ಕೂಡಿರಲಿ. ಜೀವಪರ ನಿಲುವುಗಳನ್ನು ಹೊಂದಿರಲಿ.
ಒಂದಷ್ಟು ಜ್ಞಾನಾರ್ಜನೆಯ ಕೇಂದ್ರಗಳಾಗಲಿ. ಜನರ ಜೀವನ ಮಟ್ಟ ಸುಧಾರಿಸುವ ತಾಣಗಳಾಗಲಿ. ಜನರ ಕಣ್ಣೀರು ಒರೆಸುವ ಸಾಂತ್ವನ ಆಶ್ರಮಗಳಾಗಲಿ……
ಬೆಳಗಿನಿಂದ ಇಡೀ ದಿನ ಜಗಳಗಳನ್ನೇ ಮನೆಯಲ್ಲಿ ಕುಳಿತು ನೋಡಿದರೆ ಮಾನಸಿಕ ಅಸ್ವಸ್ಥರಾಗುವ ಸಾಧ್ಯತೆ ಇರುತ್ತದೆ.
ಅದಕ್ಕೆ ಬದಲಾಗಿ ಮನುಷ್ಯನ ನೆಮ್ಮದಿಯ – ಸಂತೋಷದ ಗುಣಮಟ್ಟ ಹೆಚ್ಚಾಗುವ ಸಾಧನವಾಗಿ ಮಾಧ್ಯಮಗಳು ರೂಪಾಂತರ ಹೊಂದಲಿ ಎಂದು ಆಶಿಸುತ್ತಾ………

-ವಿವೇಕಾನಂದ. ಹೆಚ್.ಕೆ.
ಲೇಖಕ-ಹೋರಾಟಗಾರ, ಬೆಂಗಳೂರು
(ಕ್ಯಾಂಪ್: ಕೊಪ್ಪ)

☝ವಿವೇಕಾನಂದ ಎಚ್.ಕೆ, ಹೋರಾಟಗಾರರು, ಬೆಂಗಳೂರು