ಅನುದಿನ ಕವನ-೧೯೭, ಕವಿ: ಅಲ್ಲಾಗಿರಿರಾಜ್ ಕನಕಗಿರಿ, ಕವನದ ಶೀರ್ಷಿಕೆ: ಅವನ ಗೋರಿ ಮೇಲೆ ಅವನ ಕವಿತೆ

ಅವನ ಗೋರಿ ಮೇಲೆ ಅವನ ಕವಿತೆ

ಅವನು
ಕಳೆದು ಹೋದ ಕವಿತೆ ಹುಡುಕುತ್ತಿದ್ದ.
ತಕ್ಷಣ ಅದೇ ಕವಿತೆ ಬೀದಿಯಲ್ಲಿ
ಭಿಕ್ಷುಕರು ಹಾಡುತ್ತಿದ್ದರು.

ಅವನು
ನಸುಕಿನಲ್ಲಿ ಕಂಡ
ಕನಸಿನ ಚಿತ್ರ ಬಿಡುಸುತ್ತಿದ್ದ.
ತಕ್ಷಣ ಪಕ್ಕದ ಮನೆಯಲ್ಲಿ ಗೆಳತಿ
ಸತ್ತ ಸುದ್ದಿ ಯಾರೋ ಬಂದು ಹೇಳಿದರು.

ಅವನು
ನಾಳೆಗಳ ಕುರಿತು ಯೋಚನೆ ಮಾಡುತ್ತಿದ್ದ.
ತಕ್ಷಣ ಆಕಾಶವಾಣಿಯಲ್ಲಿ ಸಂತನ ಚಿಂತನ,
ನಾಳೆ ಎನ್ನುವುದು ವಿಳಾಸವಿಲ್ಲದ ಊರು ಎಂದರು.

ಅವನು
ಸಾವಿನ ಕುರಿತು ಸದಾ ಚಿಂತಿಸುತ್ತಿದ್ದ
ಒಂದು ದಿನ ಅವನ ಗೋರಿ ಮೇಲೆ,
‘ಸಾವು ಸಾವಲ್ಲ ಅದು ಜೀವನದ ಕೊನೆ ಸೋಲೆಂದು’
ಅವನ ಕವಿತೆ ಯಾರೋ ಬರೆದು ಹೋಗಿದ್ದರು.

– ಅಲ್ಲಾಗಿರಿರಾಜ್ ಕನಕಗಿರಿ
*****