ಬಳ್ಳಾರಿ, ಜು. 18 : ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿನ ಬಯಲು ರಂಗಮಂದಿರಕ್ಕೆ ರಂಗನಟಿ-ಗಾಯಕಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡುವ ಸಮಾರಂಭ ಶುಕ್ರವಾರ ಸಂಜೆ ಜರುಗಿತು.
ಇದೇ ಸಂದರ್ಭದಲ್ಲಿ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರರ “ಅಭಿವ್ಯಕ್ತಿ-ಕವನ ಸಂಕಲನವನ್ನು ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಲೋಕಾರ್ಪಣೆ ಮಾಡಿದರು. “ಇಪ್ಪತ್ತರಲ್ಲಿ ಬರಬೇಕಾಗಿದ್ದ ಕವನ ಕೃತಿಯನ್ನು ಗಂಗಾಧರ ಪತ್ತಾರರು ಎಪ್ಪತ್ತರಲ್ಲಿ ಹೊರತರುತ್ತಿರುವುದು ಅವರ ಸಹನಶೀಲತೆಯ ದ್ಯೋತಕ. ಇದು ಅವರ ನಿರಂತರತೆಯ ಕ್ರಿಯಾಶೀಲ ವ್ಯಕ್ತಿತ್ವವನ್ನು ಎತ್ತಿತೋರಿಸುತ್ತಿದೆ. ಯುವ ಪೀಳಿಗೆಯವರಿಗೆ ಇವರ ಸೃಜನಶೀಲ ವ್ಯಕ್ತಿತ್ವ ದಾರಿ ದೀಪವಾಗಬೇಕು ಎಂದು ಶ್ಲಾಘಿಸಿದರು.
ನಗರದ ವೀವೀ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಮಂಜುನಾಥ ಅವರು “ಅಭಿವ್ಯಕ್ತಿ-ಕವನ ಸಂಕಲನವನ್ನು ಪರಿಚಯಿಸಿದ ಬಗೆ ವಿಶಿಷ್ಟವಾಗಿತ್ತು. ಕಾಗುಣಿತ ದೋಷಗಳಿಲ್ಲದ, ಶಬ್ದಸೌಂದರ್ಯದ ಕನ್ನಡವನ್ನು ನಾವು ಪತ್ತಾರ್ ಸರ್ ಅವರಿಂದ ಕಲಿತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಸಂಕಲನದಲ್ಲಿರುವ ಡಾ.ಎಂ. ಬಾಲಮುರಳೀಕೃಷ್ಣರವರನ್ನು ಕುರಿತ ಕವನ ವಾಚಿಸಿದರು.
ನಗರ ಶಾಸಕ ಸೋಮಶೇಖರರೆಡ್ಡಿ, ನಾಡೋಜ ಬೆಳಗಲ್ಲು ವೀರಣ್ಣ, ಬುಡಾ ಅಧ್ಯಕ್ಷ ದಮ್ಮೂರ ಶೇಖರ್, ರಂಗನಟ ರಮೇಶಗೌಡ ಪಾಟೀಲ, ನಟ-ಪತ್ರಕರ್ತ ಪುರುಷೋತ್ತಮ ಹಂದ್ಯಾಳ, ಟಿ.ಕೊಟ್ರಪ್ಪ, ಕನ್ನಡ-ಸಂಸ್ಕೃತಿ ಇಲಾಖೆ ಬಳ್ಳಾರಿಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರು ವೇದಿಕೆಯಲ್ಲಿದ್ದರು.
ಕವನ ವಾಚನ: “ಅಭಿವ್ಯಕ್ತಿ” ವ್ಯಕ್ತಿ ಚಿತ್ರಣ ಕವನ ಕರ್ತೃ ಗಂಗಾಧರ ಪತ್ತಾರ ಅವರು ಸಂಕಲನದಲ್ಲಿರುವ ನಾಟ್ಯಕಳಾಪ್ರಪೂರ್ಣ “ಕನ್ನಡದ ಮಾಮರದಿ ತೆಲುಗು ಕೋಗಿಲೆ-ಬಳ್ಳಾರಿ ರಾಘವ”ಕವನ ವಾಚಿಸಿದ ಬಗೆ ಹೃದಯಂಗಮವಾಗಿದ್ದು ಗಮನ ಸೆಳೆಯಿತು. ತೆಲುಗು ತಲ್ಲಿಯ ಒಡಲು/ಕನ್ನಡಮ್ಮನ ಮಡಿಲು/ಕನ್ನಡದ ಮಾಮರದಿ ತೆಲುಗು ಕೋಗಿಲೆಯು/….ತಾಡಪತ್ರಿಯು ತವರು/ಬಳ್ಳಾರಿ ಪ್ರಿಯ ಉಸಿರು/ ವಿಶ್ವ ಖ್ಯಾತಿಯ ಕೀರ್ತಿ ರಾಘವರ ಹೆಸರು/…..ಕ್ಷಾತ್ರ ಬಲ ವರ್ಚಸ್ಸು/ ಬ್ರಹ್ಮಗುಣ ತೇಜಸ್ಸು/ ನವರಸದ ಓಜಸ್ಸು…..ಶಬ್ದಸೌಂದರ್ಯ ವೈಭವದ ಕವನವಾಚನ ಮನೋಜ್ಞವಾಗಿತ್ತು.
ಡಾ. ಬರಗೂರರಿಂದಲೂ ಮೆಚ್ಚುಗೆ: ಕೇವಲ ವ್ಯಕ್ತಿಚಿತ್ರಣಗಳ ಕವನ ಸಂಕಲನವಾಗಿದೆ. ಸ್ವಾಮಿ ವಿವೇಕಾನಂದ, ವರಕವಿ-ದ.ರಾ.ಬೇಂದ್ರೆ, ಕನ್ನಡದ ಮೂವರು ರಾಷ್ಟ್ರಕವಿಗಳು-ಎಂ.ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ರಂಗ ಭೂಮಿ-ಸಂಗೀತ ದಿಗ್ಗಜರಾದ ಬಳ್ಳಾರಿ ರಾಘವ, ಬೆಳಗಲ್ಲು ವೀರಣ್ಣ, ವೈ. ರಾಘ ವೇಂದ್ರರಾವ್, ಎಂ.ಬಾಲಮುರಳಿಕೃಷ್ಣ, ಎಂ.ವೆಂಕಟೇಶ ಕುಮಾರ ಹೀಗೆ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರನ್ನು ಕುರಿತ 41ಕವನಗಳು ಈ ಕೃತಿಯಲ್ಲಿವೆ. “ಪದ್ಯದ ಮೂಲಕ ವ್ಯಕ್ತಿಚಿತ್ರವನ್ನು ಕಟ್ಟಿದ ನಿದರ್ಶನಗಳಿದ್ದರೂ ಇಡೀ ಕವನ ಸಂಕಲನ ವ್ಯಕ್ತಿಚಿತ್ರ ಕವನಗಳಿಂದ ಕೂಡಿದ ನಿದರ್ಶನವಿಲ್ಲ. ಈ ದೃಷ್ಟಿಯಿಂದ ಗಂಗಾಧರ ಪತ್ತಾರರ “ಅಭಿವ್ಯಕ್ತಿ“ಯು ಹೊಸಸ್ವರೂಪದ ಸಂಕಲನವಾಗಿದೆ, ಒಂದು ಹೊಸ ಪ್ರಯೋಗವಾಗಿದೆ”ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ.
*****